ಸೂರ್ಯಶಿಖರ

ಜೂನ್ 15, 2016

"ಕಿಂಕರ ಹೂವು".

                 ಬೇಲಿಯಂಚಿನಲ್ಲಿ ಹಾಗೂ ಕಂಪೌಂಡಿನ ಬದಿಯಲ್ಲಿ ಅಲಂಕಾರಿಕ ಹೂವಿನ ಸಸ್ಯವಾಗಿ ಕಿಂಕರ ಗಿಡವನ್ನು ನೆಟ್ಟು ಬೆಳೆಸಲಾಗುತ್ತದೆ. ಇದು  ಉಷ್ಣವಲಯ ಹಾಗೂ ಸಮಶೀತೋಷ್ಣ ವಲಯ ಇವೆರಡರಲ್ಲಿಯೂ ಸೊಂಪಾಗಿ ಬೆಳೆಯಬಲ್ಲದು.ವರ್ಷದಲ್ಲಿ ಹತ್ತು ತಿಂಗಳು ಹಂತ ಹಂತವಾಗಿ ಹೂಬಿಡುವ ಸುಂದರ ಪುಷ್ಪ ಕಿಂಕರ ಹೂವು.ದೇವರ ಪೂಜೆಗೂ ಬಳಕೆಯಾಗಬಲ್ಲದು.ಹೆಂಗಳೆಯರ ಮುಡಿಯನ್ನೂ ಸಿಂಗರಿಸಬಲ್ಲ ಈ ಹೂವಿಗೆ ಗಿಡವೇ ಭೂಷಣ ಎಂದರೂ ತಪ್ಪಲ್ಲ. ಕಾರಣ, ವಿಶಿಷ್ಟವಾದ ಈ ಹೂವಿನ ಎಸಳು! .
                 ಆಂಗ್ಲ ಭಾಷೆಯಲ್ಲಿ " ಡ್ವಾರ್ಫ್ ಪೌಡರ್ ಪಫ್" (Dwarf powder puff),  "ಮಿನಿಯೇಚರ್ ಪೌಡರ್ ಪಫ್" (Miniature powderpuff) ಎಂದು ಕಿಂಕರ ಹೂವನ್ನು ಗುರುತಿಸುತ್ತಾರೆ.ಕುಂಬ್ರಿ ಮರಾಠಿ ಸಮುದಾಯದ ಜನರು ಈ ಹೂವನ್ನು "ಮಿಷಾಳೆ" ಎಂದು ಕರೆಯುತ್ತಾರೆ. "ಮಿಮೋಸೇಶಿಯೇ" (Mimosaceae) ಸಸ್ಯಕುಟುಂಬಕ್ಕೆ ಸೇರಿದ ಇದರ ವೈಜ್ಞಾನಿಕ ಹೆಸರೆಂದರೆ "ಕಾಲ್ಲಿಯೇಂಡ್ರಾ ಎಮೊರ್ಜಿನಾಟಾ" (Calliandra Emarginata).
               ಮಳೆಗಾಲ ಪ್ರಾರಂಭವಾದೊಡನೆ ಚಿಗುರೊಡೆದು, ಕೆಲ ದಿನಗಳ ಬಳಿಕ ಗಿಡದ ತುಂಬಾ ಹೂಬಿಟ್ಟು ಕಂಗೊಳಿಸುವ ಕಿಂಕರ ಹೂವು ನೋಡಲು ಅತ್ಯಂತ ವೈಭವಪೂರ್ಣವೆನ್ನಿಸಿಕೊಂಡಿದೆ.ಇದು ಗೊಂಚಲಿನಲ್ಲಿ ಅರಳುವ ಹೂವಲ್ಲ. ಬಿಡಿ ಹೂವು. ಆದರೆ, ಹೊಸದಾಗಿ ಚಿಗುರಿದ ಟಿಸಿಲಿಗೆ ದಿನವೂ ಒಂದೊಂದೇ ಹೂವಿನಂತೆ ತುದಿಯವರೆಗೂ ಅರಳಬಲ್ಲದು. ಸಪೂರವಾದ ಕಡ್ಡಿಯಂತಹ ರಚನೆಯುಳ್ಳ ಈ ಹೂವಿನ ಸಾವಿರಾರು ಎಸಳುಗಳು ಎರಡು ಸೆಂ.ಮೀ ಉದ್ದವಿರುತ್ತವೆ.ಮತ್ತು ಎಸಳಿನ ಕವಚಪಾತ್ರೆಯು ಬಿಳಿ ಬಣ್ಣದಲ್ಲಿರುತ್ತದೆ. ಹಾಗೂ ಪ್ರತೀ ಎಸಳಿನ ತುದಿಯಲ್ಲಿ ಚಿಕ್ಕದಾದ ಕಾಳಿನ ರಚನೆಯನ್ನೊಳಗೊಂಡಿದೆ. ತೀಕ್ಷ್ಣ ಕೆಂಪು ಮತ್ತು ಬಿಳಿ ಈ ಎರಡು ಬಣ್ಣಗಳಲ್ಲಿ ಕಾಣಸಿಗುವ ಈ ಹೂವಿನ ಆಯಸ್ಸು ಒಂದು ದಿನವಷ್ಟೇ! ಅಷ್ಟರಲ್ಲಿಯೇ ಪಾತರಗಿತ್ತಿಯನ್ನು ಆಕರ್ಷಿಸುವ ಸೊಬಗಿನ ಪುಷ್ಪವಿದು.
              ಕಿಂಕರ ಹೂವು ಹಳಸಿದ ಬಳಿಕ ಅದಕ್ಕೆ ಬಿಡುವ ಉದ್ದನೆಯ ಬೀಜಕೋಶಗಳು ಹಸಿರು ಬಣ್ಣದಲ್ಲಿರುತ್ತವೆ.ಬಲಿತಾಗ ಕಂದು ಬಣ್ಣಕ್ಕೆ ತಿರುಗುತ್ತದೆ. ಈ ಕವಚದೊಳಗೆ ನಾಲ್ಕೈದು ನಯವಾದ ಬೀಜಗಳಿರುತ್ತವೆ. ವಿಶೇಷವೆಂದರೆ, ಒಂದು ಹೂವಿನಲ್ಲಿ ಗರಿಷ್ಟ ಆರು ಬೀಜಕೋಶಗಳನ್ನು ಕಾಣಲು ಸಾಧ್ಯ!
             ಹಸಿರು ಕಡ್ಡಿಗೆ ಮಣಿಗಳ ಗೊಂಚಲಿನಂತೆ ಕಾಣುವ ಕಿಂಕರ ಹೂವಿನ ಮೊಗ್ಗು ನಾಲ್ಕೈದು ದಿನಕ್ಕೆ ಅರಳಿ ಕಂಗೊಳಿಸುತ್ತದೆ.ಒಮ್ಮೆ ಹೂಬಿಡಲು ಪ್ರಾರಂಭವಾದರೆ ಸತತವಾಗಿ ಆರರಿಂದ ಎಂಟು ವಾರಗಳ ಕಾಲ ಹೂವು ಅರಳುವ ಮೂಲಕ, ಗಿಡದ ತುಂಬೆಲ್ಲಾ ತನ್ನ ಸೊಬಗನ್ನು ಮೆರೆಯುತ್ತದೆ. ಬಳಿಕ  ಒಂದು ವಾರದಲ್ಲಿ ಮತ್ತೆ ಯಥಾಪ್ರಕಾರ! ಆದರೆ ಬೇಸಿಗೆಯಲ್ಲಿ ಕಿಂಕರ ಗಿಡಕ್ಕೆ ಹೂವು ಬಿಡುವುದಿಲ್ಲ. ವರ್ಷಪೂರ್ತಿಯೂ ಹಚ್ಚಹಸಿರಿನಿಂದಿರುವ ಕಿಂಕರ ಗಿಡದ ಎತ್ತರ ಆರರಿಂದ-ಏಳು ಅಡಿ. ಇದು ಮಧ್ಯಮ ಗಾತ್ರದ ಪೊದೆ ಸಸ್ಯವಾಗಿ ಬೆಳವಣಿಗೆ ಹೊಂದುತ್ತದೆ. ಈ ಸಸ್ಯದ ಟೊಂಗೆಯು ಕಂದು ಬಣ್ಣದಲ್ಲಿದ್ದು, ಮೇಲ್ನೋಟಕ್ಕೆ ಭಿರುಸಾಗಿ ಕಾಣುತ್ತದೆ.ಆದರೆ, ಟೊಂಗೆಯನ್ನು ಮುರಿದರೆ ಅದು ನಾರಿನ ಗುಣಧರ್ಮವನ್ನೊಳಗೊಂಡಿರುವುದನ್ನು ಗಮನಿಸಲು ಸಾಧ್ಯ.
         ಕಿಂಕರ ಎಲೆಯ ರಚನೆಯೂ ವಿಶೇಷವಾಗಿದೆ. ಒಂದೇ ಬುಡಕ್ಕೆ ಎರಡು ಕವಲೊಡೆದು ದ್ವಿಪರ್ಣಿ ರೂಪದಲ್ಲಿ ಕಿಂಕರ ಎಲೆಗಳು ಕಣ್ಮನ ಸೆಳೆಯುತ್ತವೆ.ನಯವಾದ ಗಾಡ ಹಸಿರು ಬಣ್ಣದ ಎಲೆಗಳ ಉದ್ದ ಆರು ಸೆಂ.ಮೀ ಗಳು. ಇದಕ್ಕೆ ಎಂಟರಿಂದ-ಒಂಭತ್ತು ಜೋಡಿ ಎಲೆಯ ರಚನೆಯಿರುತ್ತದೆ. ಒಟ್ಟಿನಲ್ಲಿ ,ಈ ಬಹುವಾರ್ಷಿಕ ಸಸ್ಯ ದ ತೀಕ್ಷ್ಣ ಕೆಂಪು ವರ್ಣದ ಪುಷ್ಪ ವರ್ಷದಲ್ಲಿ ಹೆಚ್ಚು ಸಮಯ ಹೂಬಿಡುವ ಸಸ್ಯ ಪ್ರಬೇಧವಾಗಿದೆ!
..............................................................
ಚಿತ್ರಬರಹ -- ಭವ್ಯಾ ನೇರಲಜಡ್ಡಿ .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ