ಸೂರ್ಯಶಿಖರ

ಮಾರ್ಚ್ 26, 2016

" ಕರವೀರ ಹೂವು "

                 ಅಲಂಕಾರಿಕ ಹೂವಿನ ಸಸ್ಯವಾಗಿ ರಸ್ತೆ ಬದಿಗಳಲ್ಲಿ, ಉದ್ಯಾನಗಳಲ್ಲಿ ಕರವೀರ ಗಿಡವನ್ನು ಬೆಳೆಸುತ್ತಾರೆ. ಇದು ನಿತ್ಯ ಹರಿದ್ವರ್ಣದ ಪೊದರುಗಿಡ. ತಂಪಾದ ನೆಲದಲ್ಲಿ ಹತ್ತರಿಂದ ಇಪ್ಪತ್ತು ಅಡಿ ಎತ್ತರಕ್ಕೆ ಬೆಳೆಯುವ ಚಿಕ್ಕ ಮರವೂ ಹೌದು. ಇದರ ಮೂಲಸ್ಥಾನ ದಕ್ಷಿಣ ಮೆಕ್ಸಿಕೊ ಮತ್ತು ಮಧ್ಯ ಅಮೇರಿಕಾ. ಅಪೋಸೈನೇಸಿ (Apocynaceae) ಸಸ್ಯ ಕುಟುಂಬಕ್ಕೆ ಸೇರಿದ ಕರವೀರದ ವೈಜ್ಞಾನಿಕ ಹೆಸರೆಂದರೆ, ತೀವಿಷಾ ಪೆರುವಿಯಾನಾ (Thevetia Peruviana). ಇದನ್ನು ತೀವಿಷಾ ನೆರಿಫೋಲಿಯಾ (Thevetia Neriifolia) ಹಾಗೂ ಕ್ಯಾಸ್ಕಬೇಲಾ ತೀವಿಷಾ (Cascabela Thevetia) ಎಂಬ ಹೆಸರಿನಿಂದಲೂ ಗುರುತಿಸಲಾಗುತ್ತದೆ.
            ಕನ್ನಡದಲ್ಲಿ- ಕರವೀರ, ಕಾಡು ಕಣಗಿಲೆ. ಆಂಗ್ಲ ಭಾಷೆಯಲ್ಲಿ- ಮೆಕ್ಸಿಕನ್ ಓಲಿಯೆಂಡರ್ (Mexican Oleander), ಯೆಲ್ಲೋ ಓಲಿಯೆಂಡರ್ (Yellow Oleander), ಲಕ್ಕಿ ನಟ್ (Lucky Nut), ಇಂಡಿಯನ್ ಓಲಿಯೆಂಡರ್ (Indian Oleander), ಗೀಲೊಲೆಂಡರ್ (Geelolender). ಹಿಂದಿ- ಕನೇರ್, ಪೀಲಿ ಕನೇರ್, ಕರ್ಬೇರ್. ಸಂಸ್ಕೃತ- ಕರವೀರ, ಪೀತ ಕರವೀರ, ಅಶ್ವಘ್ನ, ಅಶ್ವಮರಕ, ಹಯಮರಕ. ಮಲಯಾಳಂ- ಮಂಜಅರಳಿ, ಕನವೀರಮ್, ಕರವೀರಮ್. ಮಣಿಪುರಿ- ಉಂಟೊಂಗ್ಲೈ, ಬೆಂಗಾಳಿ- ಕೊಲ್ಕಾಫೂಲ್, ತಮಿಳು-ಮಂಜಲ್ ಅರಳಿ. ಸಿಂಹಳ- ಕನೇರು. ಹೀಗೆ ವಿವಿಧ ಭಾಷೆಗಳಲ್ಲಿ ಕರವೀರ ಹೂವು ಪ್ರಸಿದ್ಧ.
             ಗಂಟೆಯಂತಹ ರಚನೆಯುಳ್ಳ, ಸೌಮ್ಯ ಸುಗಂಧದ ಕರವೀರದ ಹೂವು  ಐದು ಎಸಳನ್ನು ಹೊಂದಿದ್ದು, ಇದರ ಮೊಗ್ಗು ಭರ್ಚಿಯಾಕಾರದಲ್ಲಿರುತ್ತದೆ. ತಿಳಿ ಹಸಿರು ಬಣ್ಣದ ಇದರ ಮೊಗ್ಗು ಅರಳಲು ನಾಲ್ಕೈದು ದಿನಗಳು ಬೇಕು.ಆದರೆ, ಎರಡು ದಿನಗಳವರೆಗೆ ಹೂವು ಗಿಡದ ಮೇಲೆ ಕೆಡದೇ ಉಳಿಯುತ್ತದೆ.ವರ್ಷಪೂರ್ತಿಯೂ ಹೂಬಿಡುವ ಈ ಸಸ್ಯ ಪ್ರಬೇಧಗಳಲ್ಲಿ  ಹಳದಿ, ಬಿಳಿ, ಕಾವಿ ಬಣ್ಣಗಳ ಹೂವುಗಳನ್ನು ನೋಡಲು ಸಾಧ್ಯ. ವಿಶೇಷವೆಂದರೆ, ಕೇಸರದಳಗಳು ಹೂವಿನ ಹೊರಗೆ ಕಾಣುವುದೇ ಇಲ್ಲ. ಬದಲಾಗಿ,ಹೂವಿನ ಬುಡದ ಕೊಳವೆಯಾಕಾರದೊಳಗೆ ನತ್ತಿನಾಕಾರದಲ್ಲಿ ಇರುತ್ತದೆ!
             ಗಿಡಕ್ಕೆ ಹೊಸದಾಗಿ ಚಿಗುರಿದ ಟೊಂಗೆಗಳು ಹಸಿರು ಬಣ್ಣದಲ್ಲಿರುತ್ತದೆ.ಬೆಳವಣಿಗೆ ಹೊಂದಿದಂತೆ ಇದು ಬೂದು ಬಣ್ಣವಾಗಿ ಮಾರ್ಪಡುತ್ತದೆ.ಇದಕ್ಕೆ ಟೊಂಗೆಯ ಚಿಗುರಿನ ತುದಿಯಲ್ಲಿಯೇ ಹೂವು ಬಿಡುತ್ತದೆ. ಮತ್ತು ಎಲೆಗಳಿರುವುದು ಕೂಡಾ ಟೊಂಗೆಯ ತುದಿಯಲ್ಲಿಯೇ.ಎಲೆಗಳು ಹತ್ತು ಇಂಚಿನಷ್ಷು ಉದ್ದವಾಗಿದ್ದು ಚೂಪಾಗಿರುತ್ತದೆ. ಇದರ ಕಾಯಿಗಳು ಹಸಿರು ಬಣ್ಣದಲ್ಲಿರುತ್ತವೆ.ಹಾಗೂ ಹಣ್ಣಾದಾಗ ಕಪ್ಪಾಗುತ್ತವೆ.ಇದರೊಳಗಿನ ಬೀಜವು ದೋಣಿಯಾಕಾರದ ಬಧ್ರವಾದ ಕವಚದಿಂದ ಆವೃತವಾಗಿದೆ.  ಗಿಡದ ಪ್ರತಿಯೊಂದು ಭಾಗಗಳೂ ಕಹಿಯಾಗಿವೆ.ಆದರೂ, ದನಕರುಗಳು ಕರವೀರ ಹೂವನ್ನು ಆರಿಸಿ ತಿನ್ನುತ್ತವೆ! ಈ ಸಸ್ಯದ ಯಾವ ಭಾಗವನ್ನು ಕತ್ತರಿಸಿದರೂ ವಿಶಿಷ್ಟ ಘಮಲಿನ ಸೊನೆಯಂತಹ ಬಿಳಿ ದ್ರವ ಒಸರುವುದು ವಿಶೇಷ. ಕರವೀರದ ಪ್ರತಿಯೊಂದು ಭಾಗಗಳೂ ಔಷಧೀಯ ಗುಣಗಳನ್ನೊಳಗೊಂಡಿದ್ದು  ಬಹು ಅಪರೂಪದ ಸಸ್ಯ ಪ್ರಬೇಧವಾಗಿದೆ.
.............................................................
ಬರಹ-- ಭವ್ಯಾ ನೇರಲಜಡ್ಡಿ.
ಚಿತ್ರಗಳು-- ಲೀಲಾವತಿ ಹೆಗಡೆ.

2 ಕಾಮೆಂಟ್‌ಗಳು:

  1. ನನಗೆ ತುಂಬಾ ಇಷ್ಟವಾದ ಹೂವು‌. ಈ ಹೂವಿನ ಕುರಿತು ನಾ ಬರೆದ ಕವನ"ಸಂಪದ"ದಲ್ಲಿ ಪ್ರಕಟವಾಗಿದೆ. ಆದರೆ Online ನಲ್ಲಿ ಮಾಹಿತಿ ಸಿಗಲಿಲ್ಲ. ಈ ಬ್ಲಾಗ್ ನಲ್ಲಿ ಮಾಹಿತಿ ಇದೆ ಎಂದು ಓದುಗರೊಬ್ಬರ ಮಾಹಿತಿ ಮೇರೆಗೆ ಓದಿದೆ. ತುಂಬಾ ಖುಷಿಯಾಯಿತು ಹೂವಿನ ಸಮಗ್ರ ಇತಿಹಾಸ ತಿಳಿದು‌. Thanks.

    ಪ್ರತ್ಯುತ್ತರಅಳಿಸಿ
  2. ತಮ್ಮ ಅಭಿಪ್ರಾಯಕ್ಕೆ ತುಂಬಾ ಧನ್ಯವಾದಗಳು ಗೀತಾ ಹೆಗಡೆಯವರೇ..

    ಪ್ರತ್ಯುತ್ತರಅಳಿಸಿ