ಸೂರ್ಯಶಿಖರ

ಫೆಬ್ರವರಿ 04, 2016

"ಕಾನನದ ಸೊಬಗು - ಗೌರಿ ಹೂವು"

                       ಕಾನನದಲ್ಲಿ ಸ್ವಚ್ಛಂದವಾಗಿ ಬೆಳೆದು,ಉಳಿದೆಲ್ಲಾ ಹೂಗಳಿಗಿಂತ ವಿಭಿನ್ನವಾದ ಎಸಳುಗಳನ್ನು ಹೊಂದಿರುವ "ಗೌರಿಹೂವು" ಕನ್ನಡದಲ್ಲಿ "ಇಂದ್ರನ ಬಳ್ಳಿ" ಎಂದೂ ಕರೆಯಲ್ಪಡುತ್ತದೆ. ಲಾಂಗಲೀ ಎಂಬ ಸಂಸ್ಕೃತ ಹೆಸರು, ಇದರ ಬೇರು  ನೇಗಿಲಿನಂತಿದೆ ಎಂದು ವಿವರಿಸುತ್ತದೆ.ಮರಾಠಿ ಹಾಗೂ ಸಂಸ್ಕೃತದಲ್ಲಿ "ಅಗ್ನಿಶಿಖಾ" , ತೆಲುಗಿನಲ್ಲಿ "ಅಗ್ನಿಸಿಖಾ", ಹಿಂದಿಯಲ್ಲಿ "ಕಲಿಹಾರೀ" ಎಂಬ ಹೆಸರಿನಲ್ಲಿ ಗುರುತಿಸಲ್ಪಡುವ  ಈ ಸುಂದರ ಪುಷ್ಪದ ಪರ್ಯಾಯ ಹೆಸರೆಂದರೆ, "ಗ್ಲೋರಿಯಸ್ ಲಿಲ್ಲಿ" (Gloriosa Lily) ಹಾಗೂ "ಹುಲಿಪಂಜ" ( Tiger clow). ಜಿಂಬಾಬ್ವೆಯ ರಾಷ್ಟ್ರೀಯ ಪುಷ್ಪವಾಗಿರುವ  "ಗ್ಲೋರಿ ಲಿಲ್ಲಿ" (Glory lily), ಭಾರತದಲ್ಲಿ ತಮಿಳುನಾಡಿನ  ರಾಜ್ಯಪುಷ್ಪ  "ನಾಭಿ" , "ಅಗ್ನಿಶಿಖೆ" ಯಾಗಿದೆ. ಸಸ್ಯಶಾಸ್ತ್ರೀಯ ಹೆಸರಿನಲ್ಲಿ "ಗ್ಲೋರಿಯಸ್ ಸುಪರ್ಬಾ" (Gloriosa Superba) ಎಂದು ಹೇಳಲಾಗುವ ಇಂದ್ರನ ಬಳ್ಳಿಯು  ದೀರ್ಘಕಾಲಿಕ ಸಸ್ಯವಾದರೂ, ಹಚ್ಚಹಸಿರಿನಿಂದ ಚಿಗುರಿ ಹೂಬಿಟ್ಟು ಕಂಗೊಳಿಸುವುದು ಮಾತ್ರ  ಭಾದ್ರಪದ ಮಾಸದಲ್ಲಿ. ಕರ್ನಾಟಕದಲ್ಲಿ ವಿಶೇಷವಾಗಿ 'ಗಣೇಶ ಚತುರ್ಥಿ" ಯ  ಸಂದರ್ಭದಲ್ಲಿಯೇ ಹೂ ಬಿಡುವುದರಿಂದ ಚೌತಿ ಹಬ್ಬದ ಗೌರಿ ಪೂಜೆಯಲ್ಲಿ ಶ್ರೇಷ್ಠ ಪುಷ್ಪವೆಂದು, ಅಗ್ನಿಶಿಖೆ ವಿಶೇಷ ಮರ್ಯಾದೆಗೆ ಪಾತ್ರವಾಗಿದೆ.ಬೇರಿನ ಮೂಲಕ ಬೆಳವಣಿಗೆ ಹೊಂದಿ ಬಳ್ಳಿಯಂತೆ ಹಬ್ಬುವ ಈ ಸಸ್ಯವು ಗ್ಲೋರಿಯಸ್ ಸಸ್ಯವರ್ಗಕ್ಕೆ ಸೇರಿದೆ. ಉಷ್ಣವಲಯದ ಕಾಡುಗಳಲ್ಲಿ ಹಾಗೂ ಕರ್ನಾಟಕದ ಪಶ್ಚಿಮ ಘಟ್ಟಗಳ ಕಾಡುಗಳಲ್ಲಿ ಹೆಚ್ಚಾಗಿ ಕಾಣಸಿಗುತ್ತದೆ.
              ಬಳ್ಳಿಯು ಮೂರರಿಂದ ನಾಲ್ಕು ಟಿಸಿಲೊಡೆದು ಚಿಗುರಿ ಬೆಳೆಯುತ್ತದೆ.ಈ ಚಿಗುರುಗಳೇ ಕ್ರಮೇಣ ತೊಟ್ಟಿಲ್ಲದ ಎಲೆಗಳಾಗಿ ಬೆಳವಣಿಗೆ ಹೊಂದುತ್ತವೆ.ಎರಡರಿಂದ ಮೂರು ಇಂಚುಗಳಷ್ಟು ಉದ್ದವಿರುವ ಎಲೆಯು ಭರ್ಚಿಯ ಆಕಾರದಲ್ಲಿದ್ದು, ಎಲೆಯ ಮೊನಚಾದ ತುದಿಯು ಸುರುಳಿಯಾಗಿರುತ್ತದೆ.ಚಿಗುರೊಡೆದ ಪ್ರತೀ ಟಿಸಿಲಿನ (ಹೆಣೆ,ಟೊಂಗೆ) ಕೊನೆ ಕೊನೆಗೆ, ಪ್ರತೀ ಎಲೆಯ ಬುಡದಲ್ಲಿ ಒಂದರಂತೆ, ಒಟ್ಟೂ ಹತ್ತರಿಂದ ಹದಿನೈದು ಅಗ್ನಿಶಿಖೆಗಳು ಉದ್ದವಾದ ತೊಟ್ಟಿಗೆ ಅರಳುತ್ತವೆ. ಪ್ರಾರಂಭದಲ್ಲಿ, ಮೊಗ್ಗು ತಿಳಿ ಹಸಿರು ಬಣ್ಣದಲ್ಲಿರುತ್ತದೆ.ಕ್ರಮೇಣ ಅರಳಿದಂತೆ ಹೂವಿನ ಬುಡ ಹಳದಿ ಬಣ್ಣಕ್ಕೆ ತಿರುಗುತ್ತದೆ.ತುದಿ ಗಾಢ ಕೆಂಪು ವರ್ಣದಲ್ಲಿ ಕಂಗೊಳಿಸುತ್ತದೆ.ವಿಶೇಷವೆಂದರೆ, ಮುರುಟಿಕೊಂಡಂತೆ ಕಾಣುವ ಆರು ಎಸಳುಗಳುಳ್ಳ ಅಗ್ನಿಶಿಖೆಯು, ಬಳ್ಳಿಯ ಮೇಲೆ  ಆರಂಟು ದಿನಗಳ ಕಾಲ ಸೊಬಗಿನಿಂದ ಕಂಗೊಳಿಸುತ್ತದೆ.ಮೂರ್ನಾಲ್ಕು ದಿನಕ್ಕೆ ಪೂರ್ಣವಾಗಿ ಅರಳುವ ಇದು ಕ್ರಮೇಣ ಮತ್ತೆರಡು ದಿನಗಳಲ್ಲಿ ಹೂವಿನ ಬುಡದಲ್ಲಿ ಕೇಸರಿ ಬಣ್ಣ ಪಡೆದಿರುತ್ತದೆ.ಕೊನೆಗೆ ಪೂರ್ಣ ಹೂವೂ ಕೆಂಪಾಗಿ ಆಯುಷ್ಯ ಕಳೆದುಕೊಳ್ಳುತ್ತದೆ.ಹೂವಿನ ಇನ್ನೊಂದು ವಿಶೇಷ ಆಕರ್ಷಣೆ ತಳಭಾಗದಲ್ಲಿರುವ ಹೂವಿನ ಕೇಸರ ದಳ!
                ಇಪ್ಪತ್ತು ಅಡಿ ಎತ್ತರದವರೆಗೂ ಈ ಸಸ್ಯ ಬಳ್ಳಿಯಂತೆ ಹಬ್ಬುತ್ತದೆ.ಇದರ ಬೇರು ಆಯುರ್ವೇದ ಹಾಗೂ ಇತರ ವೈದ್ಯಕೀಯ ಪದ್ಧತಿಗಳಲ್ಲಿ  ಉಪಯುಕ್ತವಾಗಿದೆ. ಇದರ ರಾಸಾಯನಿಕ ಸಂಘಟನೆಯೂ ಕೂಡಾ ಕುತೂಹಲಕರವಾಗಿದೆ. ಬೇರಿನಲ್ಲಿ ಕೋಲ್ಚಿಕಿನ್ (colchicine)ಎಂಬ ಅಂಶ (0.2 -- 0.3 ಶೇ) ವಿರುವುದರಿಂದ ವಿಷದಂತೆ ಕ್ರಿಯೆ ಮಾಡುತ್ತದೆ. ಇದರೊಂದಿಗೆ ಮಿಶ್ರವಾಗಿರುವ  Gloriosine ಎಂಬ ಇನ್ನೊಂದು ಅಂಶವು ಇದರ ತೀಕ್ಣತೆಗೆ ನೆರವಾಗುತ್ತದೆ. ರುಚಿಗೆ ಕ್ಷಾರ ಹಾಗೂ ಕಹಿಯಾಗಿರುವ ಇದರ ಬೇರು ಉಷ್ಣವೀರ್ಯ ಹೊಂದಿರುತ್ತದೆ. ಇದರ ಪ್ರಭಾವದಿಂದ ಗರ್ಭಪಾತವಾಗುತ್ತದೆಯೆಂದು ಆಚಾರ್ಯ ಚರಕರು ಅಭಿಪ್ರಾಯ ಪಡುತ್ತಾರೆ.ಈ ಕಾರಣದಿಂದಲೇ ಸಂಸ್ಕೃತದಲ್ಲಿ ಗರ್ಭಪಾತಿನೀ, ಗರ್ಭನುತ್ ಎಂದೂ ಅಗ್ನಿಶಿಖೆಯನ್ನು ಗುರುತಿಸಲಾಗಿದೆ. ಅಂತೆಯೇ, ದೇಹಕ್ಕೆ ಮುಳ್ಳು ಅಥವಾ ಬಾಣದ ಮೊನೆ ಇತ್ಯಾದಿ ಏನಾದರೂ ಸೇರಿಕೊಂಡಿದ್ದರೆ ಬೇರಿನ ಲೇಪನದಿಂದ ಆ ಮುಳ್ಳು ಹೊರಬರುತ್ತದೆಯೆಂಬ ಕಾರಣಕ್ಕೆ ಕಲಿಹಾರೀ ಎಂದೂ ಕರೆಯಲಾಗುತ್ತದೆ. ತಾಯಿಯನ್ನು ಹೊಡೆದವನ ಕೈ ಈ ಹೂವಿನ ಎಸಳಿನಂತೆ ಪರಿವರ್ತನೆಯಾಗುತ್ತದೆಯೆಂದು ತುಳುನಾಡಿನ ಹಳ್ಳಿಗರು ಕಥೆಯಾಗಿ ಹೇಳುತ್ತಾರೆ!  ಬಂಗಾಲಿಗಳು ಈ ಹೂವಿಗೆ ಉಲಟ ಚಂಡಾಲ, ಮಿಲಾಂಗುಲಿ ಎಂಬ ಹೆಸರಿನಿಂದ ಕರೆದರೆ, ಮರಾಠಿಯಲ್ಲಿ ಕಳಲಾವೀ,ವಾಘಚಬಕಾ. ಸಂಸ್ಕೃತದಲ್ಲಿ ಅಗ್ನಿಮುಖಿ, ಹಿಂದಿಯಲ್ಲಿ ಬಚನಾಗ,ಕಲಿಹಾರೀ,ಉಲಟ ಚಂದಲ್.ತೆಲುಗಿನಲ್ಲಿ ಅಧವಿನಾಭಿ.ಮಲಯಾಳಂನಲ್ಲಿ ಮೇದೊನೀ,ತಮಿಳಿನಲ್ಲಿ ಕಾಂದಲ್ ಹೀಗೆ ಅನೇಕ ಹೆಸರುಗಳು ಈ ಹೂವಿಗೆ ಇವೆ.
                    ಸುಶ್ರುತ ಸಂಹಿತೆಯಲ್ಲಿ- ಅಗ್ನಿಶಿಖೆಯ ಬೇರಿನ ಕಲ್ಕವನ್ನು ಕೈ ಕಾಲುಗಳ ತಳಭಾಗಕ್ಕೆ ಹಚ್ಚಬೇಕೆಂಬ ಉಲ್ಲೇಖವಿದೆ.ಬಾವು,ಹುಣ್ಣು, ಮೂಲವ್ಯಾಧಿ,ಗಂಡಮಾಲಾ (ಗಳಗಂಡ),  ಮತ್ತು ಕಫ ಸಂಬಂಧಿತ ಚರ್ಮ ರೋಗಗಳಲ್ಲಿ ಇದರ ಲೇಪನ ಉಪಯುಕ್ತ. ಇದು ಕ್ರಿಮಿಗಳನ್ನು (anti bacterial) ನಿವಾರಿಸುತ್ತದೆ.ಅಲ್ಪ ಪ್ರಮಾಣದಲ್ಲಿ  (250--500 ಮಿ.ಗ್ರಾಂ) ಬೇರಿನ ಔಷಧಿಯ ಸೇವನೆಯಿಂದ  ಅಗ್ನಿಮಾಂದ್ಯ, ಪಿತ್ತವಿಕಾರ,ಮತ್ತು ಕ್ರಿಮಿ ದೋಷಗಳು ನಿವಾರಣೆಯಾಗುತ್ತವೆ. ಸೇವಿಸುವ ಪ್ರಮಾಣವು ಆರು ಗ್ರಾಂ ಕ್ಕಿಂತ ಅಧಿಕವಾದೊಡನೆ  ತೀವ್ರವಾದ ಹೊಟ್ಟೆನೋವು, ಮತ್ತು ಹೃದಯಾಘಾತವಾಗಿ ಮರಣ ಸಂಭವಿಸುತ್ತದೆ. ಅಲ್ಲದೇ ವಾಂತಿ- ಬೇಧಿಯನ್ನುಂಟುಮಾಡಿ  ಜಠರದಲ್ಲಿ ತೀವ್ರ ದಾಹ ಮತ್ತು ಕ್ಷೋಭೆಯನ್ನುಂಟುಮಾಡುತ್ತದೆ.ಲಾಂಗಲೀ ರಸಾಯನ ಮತ್ತು ಕಾಸೀಸಾದಿ ತೈಲಗಳಲ್ಲಿ "ಅಗ್ನಿಶಿಖೆ"ಯ ಬೇರು  ಪ್ರಮುಖ ಘಟಕವಾಗಿದೆ. ರಕ್ತದಲ್ಲಿ ಸೇರಿಕೊಂಡಿರುವ ಕಫದ ಅಂಶವನ್ನು  ನಿವಾರಿಸುವುದರಿಂದ ಈ ಸಸ್ಯ ರಕ್ತ ಶೋಧಕ್ಕೆ ಸಹಾಯಕಾರಿ.ಇದರಿಂದಾಗಿ ಕುಷ್ಠ ರೋಗದಂತಹ ಚರ್ಮ ರೋಗಗಳೂ ಕೂಡಾ ಗುಣ ಹೊಂದುತ್ತವೆ.ಹಾಗೂ ವಿಷಮ ಶೀತ ಜ್ವರದಲ್ಲಿ ಇದರ ಪ್ರಯೋಗವು  ಪರಿಣಾಮಕಾರಿ ಎಂಬುದಾಗಿ ಪಾರಂಪರಿಕ ವೈದ್ಯ ವಿಜ್ಞಾನವು ನಂಬುತ್ತದೆ.
..............................................................
ಬರಹ--ಭವ್ಯಾ ನೇರಲಜಡ್ಡಿ.
ಚಿತ್ರಗಳು-- ಪ್ರದೀಪ ಹೆಗಡೆ.

1 ಕಾಮೆಂಟ್‌: