ಸೂರ್ಯಶಿಖರ

ಏಪ್ರಿಲ್ 03, 2016

" ಶಂಖಪುಷ್ಪ ".

              ತಂಪಾದ ವಾತಾವರಣ ಹಾಗೂ ತೇವಾಂಶವುಳ್ಳ ನೆಲದಲ್ಲಿ ಬಳ್ಳಿಯಾಗಿ ಹಬ್ಬಿ, ವರ್ಷಪೂರ್ತಿ ಹೂಬಿಡುವ "ಶಂಖಪುಷ್ಪ" ಬಹುವಾರ್ಷಿಕ ಸಸ್ಯ.ಸಾಮಾನ್ಯವಾಗಿ, ಹತ್ತು ಅಡಿ ಉದ್ದದವರೆಗೆ ಬೆಳೆಯುವ ಈ ಬಳ್ಳಿಗೆ ಕವಲುಗಳು ಹಲವಾರು.ಆದ್ದರಿಂದ ಇದನ್ನು ಅಲಂಕಾರಿಕ ಹೂವಿನ ಸಸ್ಯವೆಂದು ಚಪ್ಪರಕ್ಕೇರಿಸಿ ಬೆಳೆಸಿ ಆರೈಕೆ ಮಾಡಲಾಗುತ್ತದೆ.
              ಈ ಪ್ರಬೇಧ ದ ಸಸ್ಯಗಳಲ್ಲಿ, ಒಂಟಿ ಎಸಳಿನ ಹಾಗೂ ಬಹು ಎಸಳುಗಳನ್ನು ಹೊಂದಿದ ಎರಡು ತರಹದ ಹೂವುಗಳನ್ನು ಕಾಣಬಹುದು. ಹೂವಿನ ಆಕಾರದಲ್ಲಿ ವ್ಯತ್ಯಾಸವೇ ಹೊರತು ಉಳಿದಂತೆ ಈ ಸಸ್ಯದ ಗುಣಧರ್ಮ ಒಂದೇ ಆಗಿದೆ. ಗಾಢ ನೀಲಿ, ಬಿಳಿ, ತಿಳಿ ಗುಲಾಬಿ, ತಿಳಿ ನೀಲಿ ಬಣ್ಣಗಳಲ್ಲಿ ಶಂಖಪುಷ್ಪ ಹೂ ಬಿಡುತ್ತದೆ. ತಿಳಿಹಸಿರು ರಕ್ಷಾಪತ್ರವನ್ನು ಹೊಂದಿದ ಮೊಗ್ಗು ಅರಳಲು ನಾಲ್ಕು ದಿನಗಳ ಕಾಲ ಬೇಕು.ಆದರೆ, ಅರಳಿದ ಹೂವು ಒಂದೇ ದಿನದಲ್ಲಿ ಹಳಸಿಬಿಡುತ್ತದೆ. ಒಂಟಿ ಎಸಳಿನ ಹೂವು ಗೋವಿನ ಕಿವಿಯನ್ನು ಹೋಲುವಂತಿದ್ದರೆ, ಹೆಚ್ಚು ಎಸಳನ್ನು ಹೊಂದಿದ ಹೂವು ಶಂಖವನ್ನು ಹೋಲುತ್ತದೆ.ಆದ್ದರಿಂದಲೇ ಈ ಹೂವು ಮರಾಠಿ ಭಾಷೆಯಲ್ಲಿ ಗೋಖರ್ಣ, ಶಂಖಪುಷ್ಪ ಎಂದು ಗುರುತಿಸಿಕೊಂಡಿದೆ.ವಿಶೇಷವೆಂದರೆ, ಎಲ್ಲಾ ತರಹದ ಹೂವುಗೂ ಮಧ್ಯಭಾಗದಲ್ಲಿ ಬಿಳಿ ಬಣ್ಣವನ್ನು ಹೊಂದಿರುತ್ತವೆ.ಹೂವಿನ ಅಡಿಭಾಗ ನಯವಾಗಿದ್ದು, ಮೇಲ್ಭಾಗ ಹೊಳೆಯುವ ಮೆದುವಾದ ರೋಮರಚನೆಯನ್ನೊಳಗೊಂಡಿದೆ.ಒಂಟಿ ದಳದ ಹೂವುಗಳ ಬುಡದಲ್ಲೊಂದು ಪುಟ್ಟ ದಳವಿದೆ.ಆದರೆ,ಈ ರೀತಿಯ ಹೂವುಗಳಿಗೆ ಹೂವಿನ ಶಲಾಕಗಳು ಕಂಡುಬರುವುದಿಲ್ಲ. ಮೂರು ಇಂಚು ಉದ್ದದ ಶಂಖಪುಷ್ಪ ತುಸು ಕಟುವಾದ ಸುವಾಸನೆಯನ್ನೊಳಗೊಂಡಿದೆ.
                   ಶಂಖಪುಷ್ಪದ ಮೂಲ ಥಾಯ್ಲಾಂಡ್. ಇಲ್ಲಿನ ಅತಿಥಿ ಸತ್ಕಾರದ ಪ್ರಮುಖ ತಂಪು ಪಾನೀಯ "ನಾಮ್ ಡಕ್ ಅಂಚನ್" (Nam Dok Anchan) ಗೆ ಶಂಖಪುಷ್ಪದ ಕಡು ನೀಲಿ ಬಣ್ಣದ ಹೂವನ್ನು ಬಳಸಲಾಗುತ್ತದೆ. ಗುಲಾಬಿ ಮಿಶ್ರಿತ ನೇರಳೆ ಬಣ್ಣದ ಈ ಪಾನೀಯದ ಸ್ವಾದಕ್ಕಾಗಿ ಜೇನುತುಪ್ಪ ಹಾಗೂ ಲಿಂಬುರಸವನ್ನು ಮಿಶ್ರಮಾಡಿ ಸೇವಿಸುತ್ತಾರೆ.ಮತ್ತು, ಇಲ್ಲಿನ "ನಾಸಿ ಕೇರಬು" (Nasi kerabu) ಎಂಬ ಅನ್ನದ ಖಾದ್ಯದ ಬಣ್ಣಕ್ಕಾಗಿ ಈ ಹೂವಿನ ಸಾರವನ್ನು ಬಳಸುವುದು ವಿಶೇಷ. ಅಂತೆಯೇ, ಮಲೇಷಿಯಾದಲ್ಲಿ "ಪುಲುಟ್ ಕೇತನ್" (Pulut ketan) ಅಥವಾ "ಕುಹ್ ಕೇತನ್" (Kuh ketan) ಎನ್ನುವ ಅನ್ನದ ಖಾದ್ಯದ ಬಣ್ಣಕ್ಕಾಗಿ ಈ ಹೂವಿನ ಬಳಕೆ ಪ್ರಚಲಿತವಾಗಿದೆ.ಆಗ್ನೇಯ ಏಷ್ಯಾದಲ್ಲಿಯೂ ಆಹಾರದಲ್ಲಿ, ಹಾಗೂ ವಿಶೇಷವಾಗಿ ಬಿಳಿ ಹೂವನ್ನು ಔಷಧ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಕಾರಣ, ಶಂಖಪುಷ್ಪವು ಒಂದು ವನಸ್ಪತಿ ಸಸ್ಯ. ಇದರ ಹೂವು ತಂಪುದಾಯಕ ಹಾಗೂ ಹೆಚ್ಚಿನ ಉತ್ಕರ್ಷಣ ಗುಣದ ಆಗರ. ಆದ್ದರಿಂದ ಇದನ್ನು ನೆನಪಿನ ಶಕ್ತಿ ವೃದ್ಧಿಗೆ, ಖಿನ್ನತೆಯ ನಿವಾರಣಾ ಔಷಧಿ, ಕೂದಲ ಬೆಳವಣಿಗೆಯ ಔಷಧಗಳಲ್ಲಿ ಬಳಸಲಾಗುತ್ತದೆ.
               ಫೇಬಸಿಯೇ (Fabaceae) ಕುಟುಂಬವರ್ಗಕ್ಕೆ ಸೇರಿದ ಶಂಖಪುಷ್ಪದ ಸಸ್ಯಶಾಸ್ತ್ರೀಯ ಹೆಸರು ಕ್ಲಿಟೋರಿಯಾ ಟರ್ನೇಟೀ (Clitoria ternatea). ಆಂಗ್ಲ ಭಾಷೆಯಲ್ಲಿ- ಬಟರ್ ಫ್ಲೈ ಪೀ (Butterfly pea), ಬ್ಲೂ ಬೆಲ್ (Blue bell), ಬ್ಲೂ ಪೀ (Blue pea), ಕಾರ್ಡೊಫ್ಯಾನ್ (Cardo fan), ಏಷಿಯನ್ ಪೀಗನ್ ವಿಂಗ್ಸ್ (Asian pegion wings). ಹಿಂದಿ,ಬೆಂಗಾಳಿ, ಮಣಿಪುರಿ ಭಾಷೆಗಳಲ್ಲಿ- ಅಪರಾಜಿತಾ.ಕೊಂಕಣಿ ಹಾಗೂ ಕನ್ನಡದಲ್ಲಿ-ಶಂಖಪುಷ್ಪ.ಥಾಯ್ ಭಾಷೆಯಲ್ಲಿ- ಅಂಚನ್. ಮಲಯ್ ಭಾಷೆಯಲ್ಲಿ-ಬುಂಗಾ ತೇಲಂಗ್. ಸಂಸ್ಕೃತ-ಮುದ್ಗಪರ್ಣಿ.ಮಲಯಾಳಂ-ಸಂಗು ಪುಷ್ಪಮ್, ಕಟ್ಟುಪಯರ್.ತಮಿಳು-ಕನ್ನಿಕ್ಕೋಡಿ.ತೆಲುಗು-ಶಂಖಫೂಲು. ಹೀಗೆ ಹಲವಾರು ಹೆಸರುಗಳಲ್ಲಿ ಶಂಖಪುಷ್ಪವನ್ನು ಗುರುತಿಸಲಾಗುತ್ತದೆ.
               ಈ ಸಸ್ಯದ ಪ್ರತೀ ಎಲೆಯ ಬುಡದಲ್ಲಿಯೂ ಹೂವು ಅರಳುತ್ತದೆ. ಎಲೆಯು ಎರಡು ಇಂಚು ಉದ್ದವಿದ್ದು ಅಂಡಾಕಾರದಲ್ಲಿದೆ.ಆದರೆ, ಐದು ಬಿಡಿ ಎಲೆಗಳ ಗೊಂಚಲಿನ ಪರ್ಣಕವಿದು.ಇದರ ಎಲೆಗಳು ನೆಲಕ್ಕೆ ಉದುರಿ ಕೊಳೆತಾಗ ಇವು ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುತ್ತವೆ.ಹಾಗೂ ಏಳೆಂಟು ದ್ವಿದಳ ಬೀಜಗಳನ್ನೊಳಗೊಂಡ ಶಂಖಪುಷ್ಪದ ಕಾಯಿ ಏಳು ಇಂಚು ಉದ್ದವಾಗಿದ್ದು, ಒಣಗಿ ತಾನಾಗಿಯೇ ಒಡೆದು ನೆಲಕ್ಕೆ ಬಿದ್ದು ಸಹಜವಾಗಿ ನೆಲದ ತೇವಾಂಶದಲ್ಲಿ ಸಸ್ಯಾಭಿವೃದ್ಧಿಗೊಳ್ಳುತ್ತವೆ.
..............................................................
ಬರಹ-- ಭವ್ಯಾ ನೇರಲಜಡ್ಡಿ.
ಚಿತ್ರಗಳು-- ಪ್ರಭಾತ ಎಂ. ಹೆಗಡೆ,
              ವೇಣುಗೋಪಾಲ ಗೌಡ ಎಂ.ಕೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ