ಸೂರ್ಯಶಿಖರ

ಮಾರ್ಚ್ 16, 2016

" ಕಣ್ಮನ ಸೆಳೆವ- ಕಾಳ್ನೂವು "

            ಯಾವುದೇ ಆರೈಕೆಯಿಲ್ಲದೆಯೇ ಸೊಂಪಾಗಿ ಬೆಳೆವ "ಕಳ್ಳನ ಗಿಡ" ಪಶ್ಚಿಮ ಘಟ್ಟ ಪ್ರದೇಶದ ಮಲೆನಾಡಿನ ಅಡವಿಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಈ ಭಾಗದಲ್ಲಿ ಇದರ ಹೂವಿಗೆ "ಕಾಳ್ನೂವು" ಎಂದು ಕರೆಯುತ್ತಾರೆ.ಇಲ್ಲಿ, ಚೌತಿ ಹಬ್ಬದ ಗಣಪತಿಯ ಪೂಜೆಗೆ ವಿಶೇಷ ಪುಷ್ಪವಾಗಿ ಕಾಳ್ನೂವನ್ನು ಮಾಲೆ ಮಾಡಿ ಬಳಸಲಾಗುತ್ತದೆ. ಸಾಮಾನ್ಯವಾಗಿ ಅಗಸ್ಟ್ - ಸಪ್ಟೆಂಬರ್ ತಿಂಗಳಿನಲ್ಲಿ ಗಿಡದ ತುಂಬಾ ಹೂವು ಅರಳಿ ಕಂಗೊಳಿಸುತ್ತದೆ.ಹಾಗೆಯೇ, ಸಮಶೀತೋಷ್ಣ ಪ್ರದೇಶಗಳಲ್ಲಿ ಕಾಣಸಿಗುವ ಅಪರೂಪದ ಸಸ್ಯ ಪ್ರಬೇಧವಿದು.
              ಎರಡು ಮೀಟರ್ ಎತ್ತರದವರೆಗೂ ಬೆಳೆಯುವ ಈ ದೀರ್ಘಕಾಲಿಕ ಪೊದೆ ಸಸ್ಯದ ಸಸ್ಯಶಾಸ್ತ್ರೀಯ ಹೆಸರು ಆರ್ಗೇರಿಯಾ ಕ್ಯುನೇಟಾ(Argyreia Cuneata). ಇದನ್ನು ಕನ್ನಡದಲ್ಲಿ - ಕಳ್ಳನ ಗಿಡ, ಕಳ್ಳನ ಹಂಬು, ನೆಟ್ಟರುಳು ಎಂದರೆ, ಇಂಗ್ಲೀಷ್ ಭಾಷೆಯಲ್ಲಿ- ಪರ್ಪಲ್ ಮಾರ್ನಿಂಗ್ ಗ್ಲೋರಿ (Purple Morning Glory), ಮೈಸೂರು ಆರ್ಗೇರಿಯಾ(Mysore Argyreia). ಮರಾಠಿಯಲ್ಲಿ- ಮ್ಹಾಳುಂಗಿ, ತಮಿಳು ಭಾಷೆಯಲ್ಲಿ- ಕನ್ವಾಲಿ ಪೂ. ಎಂದು ಗುರುತಿಸಲಾಗುತ್ತದೆ.
            ಗಿಡವು ನಯವಾದ ಬಹು ಕಾಂಡಗಳನ್ನೊಳಗೊಂಡಿದೆ. ಚಿಗುರಿದ ಪ್ರತಿ ಟಿಸಿಲುಗಳ ತುಂಬಾ ಗಾಢ ಗುಲಾಬಿ ಬಣ್ಣದ ಕಾಳ್ನೂವುಗಳು ಅರಳುತ್ತವೆ. ತಿಳಿ ಹಸಿರಿನ ಗುಂಡಗಿನ ಮೊಗ್ಗು ಅರಳಲು ಆರರಿಂದ ಎಂಟು ದಿನಗಳು ಬೇಕು.ಆದರೆ ಪೂರ್ತಿಯಾಗಿ ಅರಳಿದ ಮಂದ ಸುವಾಸಿತ ಹೂಗಳು ಒಂದೇ ದಿನದಲ್ಲಿ ತನ್ನ ಸೊಬಗನ್ನು ಬೀರಿ ಹಳಸಿ ಹೋಗುತ್ತವೆ. ಹೂವು ಕೊಳವೆಯಾಕಾರದಲ್ಲಿದ್ದು ಐದು ಸೆಂ.ಮೀ ಉದ್ದವಿರುತ್ತದೆ.ಇದು ಬಿಡಿಯಾದ ಹೂವಲ್ಲ. ಆದರೆ, ಗರಿಷ್ಟ ಮೂರು ಹೂವಿನ ಗೊಂಚಲಿನಲ್ಲಿ ಹೂಗಳು  ಅರಳುತ್ತವೆ. ಹೂವಿನ ಕೊಳವೆಯಿಂದ ಪೂರ್ತಿಯಾಗಿ ಹೊರಚಾಚಿಕೊಂಡಿರದ ಬಿಳಿಯ ಕೇಸರದಳ ಹೂವಿನ ಪ್ರಮುಖ ಆಕರ್ಷಣೆ.
             ಈ ಸಸ್ಯದ ಎಲೆಯು ಮೂರರಿಂದ ಹತ್ತು ಸೆಂ.ಮೀ ಉದ್ದವಾಗಿದ್ದು, ಎರಡೂವರೆ ಸೆಂ.ಮೀ ಯಷ್ಟು ಅಗಲವಾಗಿರುತ್ತದೆ. ಮತ್ತು ಎಲೆಯು ತುದಿಯಲ್ಲಿ ಮೊಂಡಾಗಿರುತ್ತದೆ.ಎಲೆಯ ಇಡೀ ಅಂಚು ಗುಲಾಬಿ ಬಣ್ಣ ಹೊಂದಿರುವುದು ವಿಶೇಷ. ಕಳ್ಳನ ಗಿಡದ ಎಲೆಗಳು ಸಾಂಪ್ರದಾಯಿಕ ನಾಟಿ ಔಷಧಿಗಳಲ್ಲಿ ಬಳಕೆಯಾಗುತ್ತವೆ.
..............................................................
ಬರಹ-- ಭವ್ಯಾ ನೇರಲಜಡ್ಡಿ.
ಚಿತ್ರಗಳು-- ಪ್ರದೀಪ ಹೆಗಡೆ.

1 ಕಾಮೆಂಟ್‌: