ಸೂರ್ಯಶಿಖರ

ಫೆಬ್ರವರಿ 10, 2016

"ಗೆಂಟಿಗೆ ಹೂವು"

                 ಸಾಮಾನ್ಯವಾಗಿ ಹಳ್ಳಿಯ ಮನೆಯಂಚಿನಲ್ಲಿ, ಹೂದೋಟಗಳಲ್ಲಿ ಅಲಂಕಾರಕ್ಕಾಗಿ ಗೆಂಟಿಗೆ ಗಿಡವನ್ನು ಬೆಳೆಸುತ್ತಾರೆ.ಇದು ಹೂ ಬಿಡುವುದು ಆಶ್ವೀನ ಮಾಸದಲ್ಲಿ. ನವರಾತ್ರಿಯ ಶಾರದೆಯ ಪೂಜೆಗೆ ಶ್ರೇಷ್ಟವಾದ ಪುಷ್ಪವಿದು. ತಮಿಳುನಾಡು ಮತ್ತು ದಕ್ಷಿಣ ಭಾರತದಲ್ಲಿ ಈ ಹೂಗಳನ್ನು ಹೆಂಗಳೆಯರು ಮಾಲೆ,ದಂಡೆಗಳನ್ನಾಗಿ ಮಾಡಿ ಮದುವೆ- ಮುಂಜಿ ಆದಿಯಾಗಿ ಎಲ್ಲಾ ಸಂದರ್ಭಗಳಲ್ಲಿಯೂ ತಮ್ಮ ಮುಡಿಗೇರಿಸಿ ಅಲಂಕರಿಸಿಕೊಳ್ಳುತ್ತಾರೆ.
                ಅಕ್ಯಾಂಥೇಶಿ (Acanthaceae ) ಕುಟುಂಬಕ್ಕೆ ಸೇರಿದ ಗೆಂಟಿಗೆ ಹೂವಿನ ವೈಜ್ಞಾನಿಕ ಹೆಸರು "ಬಾರ್ಲೇರಿಯಾ ಟರ್ಮಿನಾಲಿಸ್" (Barleria Terminalis). ಗಾಢ ಪರಿಮಳಯುಕ್ತ ಪುಷ್ಪವಲ್ಲದ ಗೆಂಟಿಗೆಗೆ ತನ್ನದೇ ಆದ ವಿಶಿಷ್ಟ ಸುವಾಸನೆಯಿದೆ. ಹಳದಿ,ಬಿಳಿ,ತಿಳಿನೀಲಿ,ತಿಳಿ ನೇರಳೆ, ತಿಳಿಗುಲಾಬಿ,ನೇರಳೆ,ಗುಲಾಬಿ,ನೀಲಿ ಬಿಳಿ ಮಿಶ್ರಿತ ಪಟ್ಟೆ, ಕೆಂಪು ಮಿಶ್ರಿತ ನೀಲಿ ಬಣ್ಣಗಳಲ್ಲಿ  ಗೆಂಟಿಗೆ ಹೂವು ಅರಳಿ ನಿಂತು ನೋಡುಗರ ಕಣ್ಮನ ಸೆಳೆಯುತ್ತದೆ.
            ಗೆಂಟಿಗೆಯಲ್ಲಿ ನೂರಾ ಎಂಭತ್ತು ಪ್ರಬೇಧಗಳಿವೆ.ಆದರೆ, ಭಾರತದಲ್ಲಿ ಮೂವತ್ತು ಪ್ರಬೇಧಗಳನ್ನು ಮಾತ್ರ ಗುರುತಿಸಲಾಗಿದೆ.ಇದರ ಕೆಲವು ಪ್ರಬೇಧಗಳು ಕಾಡುಗಳಲ್ಲಿಯೂ ಬೆಳೆಯುತ್ತವೆ ಎನ್ನುವುದು ವಿಶೇಷ. ಸಾಮಾನ್ಯವಾಗಿ ಸಮಶೀತೋಷ್ಣ, ಉಷ್ಣವಲಯದಲ್ಲಿಯೂ ಬಹು ಟಿಸಿಲುಗಳನ್ನೊಳಗೊಂಡು ಸೋಂಪಾಗಿ ಬೆಳೆಯುವ  ಪೊದೆ ಸಸ್ಯಗಳಿವು. ಕರ್ನಾಟಕದಲ್ಲಿ ಹೆಚ್ಚಾಗಿ ಕೃಷಿ ಮಾಡಿರುವ ಪ್ರಮುಖವಾದ ಎರಡು ವರ್ಗಗಳ ಪೈಕಿ ಹಳದಿ ಹೂ ಬಿಡುವ ಸಸ್ಯ ಬಾರ್ಲೇರಿಯಾ ಪ್ರಿಯೊಂಟಿಸ್ (Barleria prionitis) ಒಂದಾದರೆ, ಅಂತೆಯೇ ಇನ್ನುಳಿದ ಬಣ್ಣಗಳಲ್ಲಿ ಹೂ ಬಿಡುವ ಗೆಂಟಿಗೆ ಸಸ್ಯಗಳು ಬಾರ್ಲೇರಿಯಾ ಕ್ರಿಸ್ಟಾನಾ ( Barleria cristana) ಜಾತಿಗೆ ಸೇರಿವೆ.

ಬಾರ್ಲೇರಿಯಾ ಪ್ರಿಯೊಂಟಿಸ್ (Barleria prionitis) :--

                ಸಂಸ್ಕೃತದಲ್ಲಿ -ಕುರಂಟಾ, ಮರಾಠಿಯಲ್ಲಿ -ವಜ್ರದಂತಿ ಎಂದು ಕರೆಯಲ್ಪಡುವ ಹಳದಿ ಗೆಂಟಿಗೆಯ ತವರೂರು ಭಾರತ, ಶ್ರೀಲಂಕಾ ಮತ್ತು ಪೂರ್ವ-ದಕ್ಷಿಣ- ಹಾಗೂ ಮಧ್ಯ ಆಫ್ರಿಕಾ. ಇದನ್ನು Porcupine flower (ಹಂದಿ ಮುಳ್ಳು ಹೂವು) ,ಮುಳ್ಳು ಗೋರಂಟಿ, ಮುಳ್ಳು ಮದರಂಗಿ ,ಗುಬ್ಬಿ ಮುಳ್ಳು ಗಿಡ, ಕಿಂಕಿರಾತ, ಎಂದೂ ಕರೆಯುತ್ತಾರೆ.
               ಚಿಗುರಿನ ತುದಿಗೆ ಪ್ರತೀಬಾರಿ ಹೂಬಿಡುವಾಗಲೂ ಎರಡು ಬಿಡಿ ಹೂಗಳು ಬುಡದಲ್ಲಿ ರಕ್ಷಾಕವಚದೊಂದಿಗೆ ಅರಳುತ್ತವೆ. ಈ ಸಸ್ಯದ ಎತ್ತರ ಎಲ್ಲಾ ತರಹದ ಭೂಮಿಯಲ್ಲಿಯೂ ಒಂದೇ ರೀತಿ ಇದ್ದು ಸಾಮಾನ್ಯವಾಗಿ ನಾಲ್ಕರಿಂದ ಐದು ಅಡಿ ಎತ್ತರಕ್ಕೆ ಬೆಳೆಯುತ್ತವೆ.ನೀಳವಾದ ಹಾಗೂ ಗಾಢ ಹಸಿರು ಬಣ್ಣದ  ನಯವಾದ ಎಲೆಗಳನ್ನು ಹೊಂದಿದ ಹಳದಿ ಗೆಂಟಿಗೆಗೆ ಪ್ರತಿ ಎಲೆಯ ಬುಡದ ಕಾಂಡಕ್ಕೆ ಎರಡರಿಂದ ನಾಲ್ಕು ಚೂಪಾದ ಮುಳ್ಳುಗಳು ಇರುತ್ತವೆ.
              ಹಳದಿ ಗೆಂಟಿಗೆಯು ಆಯುರ್ವೇದದಲ್ಲಿ ವಿವಿಧ ಔಷಧಿಗಳಿಗಾಗಿ ಬಳಕೆಯಾಗುತ್ತದೆ.ಇದರ ಎಲೆಯ ರಸವನ್ನು, ಮಳೆಗಾಲದಲ್ಲಿ ಉಂಟಾಗುವ ಚರ್ಮದ ನಂಜಿನ ತೊಂದರೆಗೆ ಬಳಸಲಾಗುತ್ತದೆ. ಅಂತೆಯೇ ಕಹಿ ರುಚಿಯ ಈ ಗೆಂಟಿಗೆ ಎಲೆಯ ರಸವು ವಾತ,ಕಫ,ಕುಷ್ಟ,ಬಾವು,ಹುಣ್ಣು,ಕೀಟ ಕಡಿದ ಗಾಯ,ಹೇನು,ಕೂದಲ ಸಮಸ್ಯೆಗೆ ಮನೆಮದ್ದಾಗಿ ಬಳಸಲಾಗುತ್ತದೆ.
          ಪುಷ್ಪದ ಎರಡು ಕೇಸರದಳಗಳು ಹೊರಚಾಚಿಕೊಂಡಂತೆ ಇದ್ದು , ಐದು ಎಸಳಿನ ಈ ಹೂವು ಬಾಯ್ದೆರೆದು ನಾಲಿಗೆ ಹೊರ ಚಾಚಿದ ಜೀವಿಯಂತೆ ಕಂಡುಬರುತ್ತದೆ. ಸಿಂಹಳದಲ್ಲಿ ಗೆಂಟಿಗೆಗೆ "ಕಾಟು ಕರಂಡು" ಎನ್ನುತ್ತಾರೆ.

ಬಾರ್ಲೇರಿಯಾ ಕ್ರಿಸ್ಟಾನಾ ( Barleria cristana):--

           ಭಾರತ, ಉತ್ತರ ಚೀನಾ ಮತ್ತು ಮಯನ್ಮಾರ್ ದೇಶಗಳಲ್ಲಿ ಹೆಚ್ಚಾಗಿ ಕಂಡುಬರುವ ಗೆಂಟಿಗೆ ಹೂವುಗಳ  ಬಾರ್ಲೇರಿಯಾ ಕ್ರಿಸ್ಟಾನಾ ( Barleria cristana)  ಜಾತಿಯಲ್ಲಿ ಫಿಲಿಫೈನ್ ವೈಲೆಟ್ (philippine violet), ಬ್ಲೂಬೆಲ್ ಬಾರ್ಲೇರಿಯಾ (bluebell barleria), ಕ್ರಿಸ್ಟೆಡ್ ಫಿಲಿಫೈನ್ ವೈಲೆಟ್ (crested philippine violet), ಬ್ಲೂ ಬಾರ್ಲೇರಿಯಾ (blue barleria) ಪ್ರಮುಖವಾದವುಗಳು. ಇವುಗಳನ್ನೂ ಗೆಂಟಿಗೆ ಹೂವುಗಳೆಂದೇ ಕರೆಯಲಾಗುತ್ತದೆ. ಪೊದೆಗಳು ಚಿಗುರೊಡೆದು ಹೂ ಬಿಡುವಾಗ ಗೊಂಚಲಿನಂತೆ ಗಿಡದ ತುಂಬಾ ಕಂಗೊಳಿಸುತ್ತವೆ. ಈ ಹೂವಿನ ಬುಡದಲ್ಲಿ ರಕ್ಷಾ ಪತ್ರಗಳಿದ್ದು ಅವು ಒಣಗಿದ ಮೇಲೆ ಮುಳ್ಳಿನಂತೆ ಚುಚ್ಚುತ್ತವೆ. ಗಾಢ ಹಸಿರಿನ ದೀರ್ಘ ಅಂಡಾಕಾರದ ಎಲೆಗಳನ್ನು ಹೊಂದಿದ ಗೆಂಟಿಗೆಯ ಹೂವು ಐದು ಸೆಂ.ಮೀ ಉದ್ದವಿದ್ದು ಕೊಳವೆಯಂತೆ ಕಾಣುತ್ತದೆ.ಇದು ಎರಡು ದಿನಗಳ ಕಾಲ ಕೆಡದೇ ಉಳಿಯುವ ಸೊಬಗಿನ ಪುಷ್ಪ. ಈ ಗೆಂಟಿಗೆ ಸಸ್ಯಗಳಿಗೆ ಮರಾಠಿಯಲ್ಲಿ "ಕೋರಾಂಠಿ"  ಎಂದು ಕರೆಯುತ್ತಾರೆ.
           ಒಟ್ಟಿನಲ್ಲಿ, ಈ ಎಲ್ಲಾ ಪ್ರಬೇಧದ ಗೆಂಟಿಗೆ ಸಸ್ಯವನ್ನು ಒಟ್ಟುಗೂಡಿಸಿ ಅದಕ್ಕೆ ಕನ್ನಡದಲ್ಲಿ ಗೊರಟೆ, ಸ್ಪಟಿಕ, ಜಟಕ ಸಸ್ಯವೆಂದು ಹೀಗೆ ಹಲವಾರು ಹೆಸರುಗಳಿಂದ ಗುರುತಿಸಲಾಗುತ್ತದೆ. ಸಾಮಾನ್ಯವಾಗಿ ಈ ಎಲ್ಲಾ ವಿಧದ ಗೆಂಟಿಗೆ ಸಸ್ಯದ ಕಾಂಡವು ನಯವಾದ ಗಿಣ್ಣುಗಳಿಂದ ಕೂಡಿದ್ದು ಬಹಳ ಸುಟಿಯಾಗಿದೆ. ಅಂಡಾಕಾರದ ಗಟ್ಟಿಯಾದ ಕಂದುಬಣ್ಣದ ಬಲಿತ ಬೀಜಕೋಶಗಳಲ್ಲಿ (capsules) ಎರಡರಿಂದ ನಾಲ್ಕು ಬೀಜಗಳಿರುತ್ತವೆ. ಬೀಜಗಳಿಂದ, ಟಿಸಿಲುಗಳನ್ನು ,ಬೇರು ಇರುವ ಕಾಂಡಗಳನ್ನು ಸಹ ನೆಟ್ಟು ಸಸ್ಯಾಭಿವೃದ್ಧಿ ಮಾಡಲಾಗುತ್ತದೆ.
               ಅತಿಯಾಗಿ ನೀರನ್ನು ಆಶ್ರಯಿಸದ ಈ ಸಸ್ಯಗಳು ಹೆಚ್ಚು ಆರೈಕೆಯನ್ನೂ ಬಯಸುವುದಿಲ್ಲ. ಆದರೆ ತಂಪಾದ ಪ್ರದೇಶದಲ್ಲಿ ವರ್ಷವಿಡೀ ಹೂ ಬಿಡುವ ಸಸ್ಯ ಪ್ರಬೇಧಗಳಿವು.ಈ ಗಿಡಗಳಿಗೆ ರೋಗಬಾಧೆ ಕಡಿಮೆಯಿರುವ ಕಾರಣ , ಬಹಳ ವರ್ಷಗಳವರೆಗೆ ಸಂರಕ್ಷಿಸಬಹುದಾದ ಸಸ್ಯವಿದು.
..............................................................
ಬರಹ--ಭವ್ಯಾ ನೇರಲಜಡ್ಡಿ.
ಚಿತ್ರಗಳು-- ಪ್ರದೀಪ ಹೆಗಡೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ