ಸೂರ್ಯಶಿಖರ

ಏಪ್ರಿಲ್ 30, 2016

" ಚಿತ್ರಮೂಲ ಹೂವು ".

               ಬೆಚ್ಚಗಿನ ವಾತಾವರಣವನ್ನು ಅಪೇಕ್ಷಿಸಿ, ಕಾನನದಲ್ಲಿ ಬೆಳೆಯುವ ನಿತ್ಯಹರಿದ್ವರ್ಣ ಪೊದೆಸಸ್ಯ ಚಿತ್ರಮೂಲ.ಇದನ್ನು ಕನ್ನಡ ಭಾಷೆಯಲ್ಲಿ ಚಿತ್ರಮೂಲಿಕಾ, ಚಿತ್ರಮಲ್ಲಿಗೆ ಎಂದೂ ಕರೆಯುತ್ತಾರೆ. ಹಿಂದಿಯಲ್ಲಿ- ಚಿತ್ರಕ್, ಇಂಗ್ಲೀಷ್ ಭಾಷೆಯಲ್ಲಿ- ಲೀಡ್ವಾರ್ಟ್ (Leadwort) ಎಂದರೆ, ತಮಿಳಿನಲ್ಲಿ- ಚಿತ್ರಮೂಲಮ್, ಓರಿಯಾ ಭಾಷೆಯಲ್ಲಿ -ಓಗ್ನಿ ಎಂದು ಗುರುತಿಸಲಾಗುತ್ತದೆ. ಫ್ಲಂಬೆಗಿನೇಶಿಯಾ (Plumbaginaceae) ಸಸ್ಯಕುಟುಂಬಕ್ಕೆ ಸೇರಿದ  ಇದರ ಸಸ್ಯಶಾಸ್ತ್ರೀಯ ಹೆಸರು ಪ್ಲಂಬೇಗೊ ಇಂಡಿಕಾ (Plumbago Indica). ಇದರ ಮೂಲಸ್ಥಾನ ಆಗ್ನೇಯ ಏಷ್ಯಾ. ಮಲೆನಾಡಿನ ದಟ್ಟಾರಣ್ಯದಲ್ಲಿ ಈ ಸಸ್ಯಪ್ರಬೇಧವು ಹೆಚ್ಚಾಗಿ ಕಾಣಸಿಗುತ್ತದೆ.
                ಸಾಮಾನ್ಯವಾಗಿ, ಈ ಸಸ್ಯವು ಇಪ್ಪತ್ತು ವಿವಿಧ ಪ್ರಬೇಧಗಳನ್ನೊಳಗೊಂಡಿದೆ.ಆದರೆ, ಫ್ಲಂಬೇಗೊ ಅಫಿಲ್ಲಾ (Plumbago Aphylla), ಪ್ಲಂಬೇಗೊ ಅರಿಕ್ಯುಲಾಟಾ (Plumbago Auriculata), ಪ್ಲಂಬೇಗೊ ಸೀರುಲಿ (Plumbago caerulea), ಪ್ಲಂಬೇಗೊ ಯುರೋಪಿಯಾ (Plumbago Eropaea), ಪ್ಲಂಬೇಗೊ ಇಂಡಿಕಾ (Plumbago Indica), ಪ್ಲಂಬೇಗೊ ಪುಲ್ಚೇಲ್ಲಾ (Plumbago Pulchella), ಪ್ಲಂಬೇಗೊ ಸ್ಕಾಂಡೆನ್ಸ್ (Plumbago Scandens), ಪ್ಲಂಬೇಗೊ ವಿಸ್ಸಿ (Plumbago Wissi), ಪ್ಲಂಬೇಗೊ ಜೀಲೇನಿಕಾ (Plumbago Zeylanica). ಇವು ಚಿತ್ರಮೂಲ ಸಸ್ಯದ ಪ್ರಮುಖ ಪ್ರಬೇಧಗಳಾಗಿವೆ.
                 ಈ ಹೂವಿನ ಬೇರೆ ಬೇರೆ ಪ್ರಬೇಧಗಳಲ್ಲಿ, ವಿವಿಧ ವರ್ಣಗಳನ್ನೊಳಗೊಂಡ ಹೂವುಗಳಿವೆ. ರಕ್ತ ಕೆಂಪು, ಬಿಳಿ, ನೀಲಿ, ನೇರಳೆ ಬಣ್ಣಗಳಲ್ಲಿ ಬಿಳಿ ಹಾಗೂ ರಕ್ತ ಕೆಂಪು ವರ್ಣದ ಹೂವುಗಳು ಹೋಲಿಕೆಯಲ್ಲಿ ಒಂದೇ ತೆರನಾಗಿವೆ.ಇತರ ಬಣ್ಣದ ಹೂಗಳು ಹೂದೋಟಕ್ಕೆ ಸೀಮಿತವಾದ ಸಸ್ಯಗಳು. ಬಿಳಿ ಬಣ್ಣದ ಹೂವಿನ ಚಿತ್ರಮೂಲ ವನ್ನು ಔಷಧಗಳಲ್ಲಿ ಬಳಸಲಾಗುವ ಕಾರಣ, ಇದನ್ನೂ ಸಹ ಉದ್ಯಾನವನಗಳಲ್ಲಿ ಬೆಳೆಸಲಾಗುತ್ತದೆ.ಇವು ವರ್ಷಪೂರ್ತಿ ಹೂಬಿಡುವ ಸಸ್ಯ ಪ್ರಬೇಧಗಳು.ಆದಾಗ್ಯೂ, ಕಾಡಿನಲ್ಲಿ ಬೆಳೆಯುವ ಈ ಸಸ್ಯ, ಹಾಗೂ ಇದರ ಹೂವು ಈ ಎಲ್ಲಾ ಪ್ರಬೇಧಗಳಿಗಿಂತ ಆಕರ್ಷಕವಾದದ್ದು.
                 ಚಳಿಗಾಲದಲ್ಲಿ ಹೂಬಿಡುವ ರಕ್ತ ಕೆಂಪು ವರ್ಣದ ಚಿತ್ರಮೂಲ ಹೂವು ತನ್ನ ಆಕಾರ, ಹೊಳೆಯುವ ಬಣ್ಣದಿಂದಲೇ ಗಮನ ಸೆಳೆಯುತ್ತದೆ. ಐದು ಎಸಳನ್ನು ಮುಕುಟದಲ್ಲಿ ಹೊಂದಿದ ಕೊಳವೆಯಾಕಾರದ ಇದು ಗೊಂಚಲಿನಲ್ಲಿ ಅರಳುತ್ತದೆ. ಇದರ ಎಸಳು ತೆಳುವಾಗಿದ್ದು, ಹಾಲೆಯಂತೆ ತೋರುತ್ತದೆ. ಹಸಿರು ಹಾಗೂ ಕೆಂಪು ಮಿಶ್ರಿತ ರೋಮರಚನೆಯುಳ್ಳ ಪುಷ್ಪ ಪಾತ್ರೆಗಳು ಅಂಟಿನಿಂದ ಕೂಡಿದೆ.ಇದು ಕೀಟಗಳಿಂದ ರಕ್ಷಣೆ ಪಡೆಯಲು ಸಹಾಯಕವೂ ಹೌದು.
                ಈ ಸಸ್ಯವು ಎರಡು ಮೀಟರ್ ಎತ್ತರದವರೆಗೆ ಬೆಳವಣಿಗೆ ಹೊಂದುತ್ತದೆ.ಮತ್ತು ಇದರ ಬೇರು ಸುತ್ತಲಿನ ಪ್ರದೇಶವನ್ನಾಕ್ರಮಿಸಿ ಬಹುದೂರದವರೆಗೆ ಅಲ್ಲಲ್ಲಿ ಚಿಗುರೊಡೆದು ಕೂಡಾ ಬೆಳೆಯುತ್ತದೆ.ಅಂಡಾಕೃತಿಯ ಗಾಢ ಹಸಿರುಬಣ್ಣದ ನಯವಾದ ಎಲೆಗಳು ಹಾಗೂ ಸಪೂರವಾದ ಕಾಂಡವನ್ನೊಳಗೊಂಡ ಬಹು ಅಪರೂಪದ ಸಸ್ಯವಿದು.
..............................................................
ಬರಹ-- ಭವ್ಯಾ ನೇರಲಜಡ್ಡಿ.
ಚಿತ್ರಗಳು-- ಭಾಗ್ಯಶ್ರೀ. ವಿ. ಹೆಗಡೆ.
              ವೇಣುಗೋಪಾಲ ಗೌಡ. ಎಂ.ಕೆ.

1 ಕಾಮೆಂಟ್‌: