ಸೂರ್ಯಶಿಖರ

ಜೂನ್ 14, 2016

" ನಂಜಾಟಲೆ ಹೂವು ".

              ಹಲವಾರು ಕೊಂಬೆಗಳನ್ನು ಹೊಂದಿ, ಚಿಕ್ಕ ಮರವಾಗಿ ಬೆಳೆಯುವ ನಂಜಾಟಲೆ ಸಸ್ಯವು ಸಾಮಾನ್ಯವಾಗಿ ಹತ್ತು ಅಡಿ ಎತ್ತರದವರೆಗೂ ಬೆಳೆಯುತ್ತದೆ. ಕನ್ನಡದಲ್ಲಿ ನಂದಿಬಟ್ಟಲು ಎಂದೂ ಹೆಸರಿದೆ. ನಂಜಾಟಲೆ ಹೂವು ಶಿವ ಪೂಜೆಗೆ ವಿಶೇಷವೆನಿಸಿದ ಪುಷ್ಪ.
              ಹಿಂದಿ ಭಾಷೆಯಲ್ಲಿ- ಚಾಂದನೀ, ತಗರಿ. ತಮಿಳು- ನಂದಿಯಾರ್ ವಟ್ಟೈ. ಗುಜರಾತಿ- ಸಗರ್. ಮರಾಠಿ- ಅನಂತ, ತಗರ್. ಇಂಗ್ಲೀಷ್ ನಲ್ಲಿ- ಕ್ರೇಪ್ ಜಾಸ್ಮಿನ್ ( Crape Jasmine), ಪಿನ್ವೀಲ್ (Pinwheel), ಮೂನ್ಬೀಮ್ (Moonbeam) ಎಂದು ಹೇಳಲಾಗುವ ನಂಜಾಟಲೆ ಯ ಸಸ್ಯಶಾಸ್ತ್ರೀಯ ಹೆಸರು " ಥೇಬರ್ನಮಂಟಾನಾ ದಿವಾರಿಕಾಟಾ "( Tabernaemontana Divaricata ). ಇದನ್ನು, ಥೇಬರ್ನಮಂಟಾನಾ ಸಿಟ್ರಿಪೋಲಿಯ ( Tabernaemontana Citrifolia ) ಹಾಗೂ ಥೇಬರ್ನಮಂಟಾನಾ ಕೊರೊನೇರಿಯ (Tabernaemontana Coronaria) ಎಂಬ ಹೆಸರುಗಳಿನಂದಲೂ ಗುರುತಿಸಲಾಗುತ್ತದೆ.
              ಭಾರತದೆಲ್ಲೆಡೆ ಸಹಜವಾಗಿ ಬೆಳೆಯುವ ಈ ಸಸ್ಯವನ್ನು ಅಲಂಕಾರಿಕ ಮರವನ್ನಾಗಿಯೂ ನೆಟ್ಟು ಬೆಳೆಸುತ್ತಾರೆ. ಆದ್ದರಿಂದ, ಗೇಣುದ್ದದ ಗಿಡದಿಂದ - ಹತ್ತು ಅಡಿ ಎತ್ತರದವರೆಗಿನ ನಂಜಾಟಲೆ ಮರ ಕಾಣಸಿಗುತ್ತದೆ. ಇದರ ಕಾಂಡವು ಬಿಳಿ ಬಣ್ಣದಲ್ಲಿದೆ.ಎಲೆಗಳು ಗಾಢ ಹಸಿರು ಬಣ್ಣದಲ್ಲಿದ್ದು ದೀರ್ಘ ವೃತ್ತಾಕಾರದಲ್ಲಿರುತ್ತವೆ ಹಾಗೂ  ಎಲೆಯ ತುದಿ ಚೂಪಾಗಿರುತ್ತದೆ. ಚಿಕ್ಕ ಗಿಡವಾಗಿ ಬೆಳೆಯುವ ನಂಜಾಟಲೆಯ ಒಂದು ಪ್ರಬೇಧದ ಎಲೆಯು ಬಿಳಿ ಹಾಗೂ ಹಸಿರು ಮಿಶ್ರಿತ ಪಟ್ಟೆಯಂತೆ ಬಣ್ಣವನ್ನು ಒಳಗೊಂಡಿರುವುದು ವಿಶೇಷ. ಇದರ ಹೂವು ಶುಭ್ರ ಬಿಳಿ ವರ್ಣದಲ್ಲಿರುತ್ತದೆ. ನಂಜಾಟಲೆಯ ಎಲೆ ಮತ್ತು ಕಾಂಡ ಕತ್ತರಿಸಿದರೆ ಬಿಳಿಯ ದ್ರವ ಜಿನುಗುತ್ತದೆ. ಸಸ್ಯದ ಭಾಗಗಳು ಕಹಿಯಾಗಿರುತ್ತವೆ.
                ಸಾಮಾನ್ಯವಾಗಿ  ನಂಜಾಟಲೆ ಯಲ್ಲಿ , ಬಿಳಿ-ತಿಳಿ ಹಳದಿ ಮಿಶ್ರಿತ ಬಣ್ಣ ಮತ್ತು ಬಿಳಿ ಬಣ್ಣದ ಹೂವುಗಳಿವೆ. ಇದರಲ್ಲಿ, ಐದು ಎಸಳಿನ ಹೂಗಳು ಹಾಗೂ ಇದಕ್ಕೂ ದೊಡ್ಡ ಆಕಾರದ, ಹೆಚ್ಚು ದಳಗಳನ್ನು ಹೊಂದಿದ ಹೂವುಗಳನ್ನೂ ನೋಡಲು ಸಾಧ್ಯ. ಇವುಗಳಲ್ಲಿ ಬಿಡಿ ಹೂಗಳು ಮತ್ತು  ಗೊಂಚಲಿನಲ್ಲಿ ಅರಳುವ ಹೂಗಳೂ ಸಹ ಇವೆ.ತುಸು ಉದ್ದ ಎಸಳಿನ ಹಳದಿ ಮಿಶ್ರಿತ ಐದು ಎಸಳಿನ ಹೂವು ಅತ್ಯಂತ ಸುವಾಸನೆ ಭರಿತ ಪುಷ್ಪ. ಸಾಮಾನ್ಯವಾಗಿ, ಎಲ್ಲಾ ತರಹದ ನಂಜಾಟಲೆ ಯ ಮೊಗ್ಗು ಭರ್ಚಿಯಾಕಾರದಲ್ಲಿದ್ದು, ಹೂವು ಪರಿಮಳಯುಕ್ತವಾಗಿರುತ್ತವೆ.
              ಆದರೆ, ಗೊಂಚಲಿನಲ್ಲಿ ಅರಳುವ ಐದು ಎಸಳಿನ ಚಿಕ್ಕ ಬಿಳಿ ಹೂಗಳು   ಸೊಗಸಾದ ಸುವಾಸಿತ ಪುಷ್ಪಗಳಲ್ಲ.ಬದಲಾಗಿ, ಮಂದ ಕಟು ಘಮಲನ್ನೊಳಗೊಂಡಿದೆ.ಹಾಗೂ ಇದರ ಮೊಗ್ಗು ಚೂಪಾಗಿರದೇ ಗುಂಡಾಗಿದೆ.ಇದರ ತಿಳಿ ಹಸಿರು ಮೊಗ್ಗು ಅರಳಲು ಮೂರ್ನಾಲ್ಕು ದಿನಗಳು ಬೇಕು.ಅಂತೆಯೇ, ಹೂವು ಉದುರುವುದು ಕೂಡಾ ಎರಡು ದಿನಗಳ ನಂತರವೇ. ನಿತ್ಯಹರಿದ್ವರ್ಣ ನಂಜಾಟಲೆಯ ಈ ಪ್ರಬೇಧವು ನೀರನ್ನು ಆಶ್ರಯಿಸದೆಯೇ ವರ್ಷಪೂರ್ತಿಯೂ ಹೂಬಿಟ್ಟು ಕಂಗೊಳಿಸುತ್ತದೆ! ಇತರ ಪರಿಮಳಯುಕ್ತ ನಂಜಾಟಲೆ ಪ್ರಬೇಧಗಳು ವರ್ಷವಿಡೀ ಹಚ್ಚ ಹಸಿರಿನಿಂದ ಕೂಡಿದ್ದರೂ ಹೂ ಬಿಡುವುದು ಗಿಡಕ್ಕೆ ತೇವಾಂಶ ಸಿಕ್ಕಾಗ ಮಾತ್ರ!
..............................................................
ಚಿತ್ರಬರಹ -- ಭವ್ಯಾ ನೇರಲಜಡ್ಡಿ .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ