ಸೂರ್ಯಶಿಖರ

ಜೂನ್ 15, 2016

" ನಿತ್ಯಪುಷ್ಪ ".

            ಎಲ್ಲಾ ತರಹದ ಮಣ್ಣಿನ ಗುಣಧರ್ಮ ಹಾಗೂ ಹವಾಮಾನಕ್ಕೆ ಒಗ್ಗಿಕೊಂಡು ಬೆಳೆಯುವ ನಿತ್ಯಪುಷ್ಪವು ನಿತ್ಯವೂ ಹೂಬಿಡುವ ಸಸ್ಯಪ್ರಬೇಧ. ಆದ್ದರಿಂದಲೇ ಈ ಹೂವಿಗೆ ನಿತ್ಯಪುಷ್ಪ ಎಂಬ ಹೆಸರಿನಿಂದ ಕರೆಯುತ್ತಾರೆ. ವೆಸ್ಟ್ ಇಂಡೀಸ್ ದ್ವೀಪ ಸಮುದಾಯವು ಈ ಹೂವಿನ ತವರೂರು. ಮೂರು ಶತಮಾನಗಳೀಚೆಗೆ ಭಾರತಕ್ಕೆ ಪ್ರವೇಶಿಸಿದ್ದಾದರೂ, ಇಂದು ಇದು ಭಾರತದಾದ್ಯಂತ ಕಾಣಸಿಗುವ ಔಷಧಿ ಸಸ್ಯವಾಗಿದೆ.
           ಭಾರತದಲ್ಲಿ, ಸಮುದ್ರದಂಚಿನ ಪ್ರದೇಶಗಳಲ್ಲಿ ತಾನಾಗಿಯೇ ಬೆಳೆಯುವ ಈ ಸಸ್ಯವರ್ಗದಲ್ಲಿ ಪ್ರಮುಖವಾಗಿ ಕಂಡುಬರುವುದು ಗುಲಾಬಿ ಮಿಶ್ರಿತ ತಿಳಿ ನೇರಳೆ ಮತ್ತು ಬಿಳಿ ಬಣ್ಣದ ಹೂವುಗಳು. ಕ್ರಮೇಣ ಹೂದೋಟಗಳಲ್ಲಿ, ಮನೆಯಂಗಳದಲ್ಲಿ ಸ್ಥಾನ ಪಡೆದ ನಿತ್ಯಪುಷ್ಪ ಗಳು ಇಪ್ಪತ್ತಕ್ಕೂ ಹೆಚ್ಚಿನ ಬಣ್ಣಗಳಲ್ಲಿ ಅರಳುತ್ತವೆ. ಒಂದೇ ಹೂವಿನ ಬೀಜಕೋಶದ ಬೀಜಗಳನ್ನು ಭಿತ್ತಿದರೆ, ಹುಟ್ಟಿದ ಬೇರೆ ಬೇರೆ ಗಿಡಗಳಲ್ಲಿ ವಿವಿಧ ಬಣ್ಣದ ಹೂವು ಬಿಡುವುದು ಈ ಸಸ್ಯದ ವಿಶೇಷತೆ. ಸಾಮಾನ್ಯವಾಗಿ, ಒಂದೇ ತರಹದ ಹೋಲಿಕೆಯುಳ್ಳ ಹೂವುಗಳು ಅರಳುವ ಸಸ್ಯದ  ಭಾಗಗಳು ನಯವಾಗಿರುತ್ತವೆ.ಆದರೆ, ವಿವಿಧ ಬಣ್ಣದ ನಿತ್ಯಪುಷ್ಪದ ಸಸ್ಯಗಳು ಅದರಲ್ಲಿಯೂ ಅಭಿವೃದ್ಧಿ ಹೊಂದಿದ ತಳಿಯ ಸಸ್ಯಗಳು ತುಸು ರೋಮ ರಚನೆಯನ್ನೊಳಗೊಂಡಿರುತ್ತವೆ.
            ಐದು ಎಸಳಿನ ಹೂವು, ದೀರ್ಘ ಅಂಡಾಕೃತಿಯ ಗಾಢ ಹಸಿರು ಬಣ್ಣದ  ಎಲೆ, ಒಂದೇ ಹೂವಿಗೆ ಬಿಡುವ ಹಲವಾರು ಬೀಜಗಳನ್ನೊಳಗೊಂಡ ಹಸಿರು ಬಣ್ಣದ ಜೋಡಿ ಬೀಜಕೋಶಗಳು, ಮೃದುವಾದ ಕಾಂಡ, ಬೇರು ಹೀಗೆ ಈ ಸಸ್ಯದ ಎಲ್ಲಾ ಭಾಗಗಳೂ  ಅತ್ಯಂತ ಕಹಿಯಾಗಿವೆ. ಆದ್ದರಿಂದಲೇ ಈ ಸಸ್ಯದ ಎಲ್ಲಾ ಭಾಗಗಳೂ ಔಷಧಿಯುಕ್ತ. ವೆಸ್ಟ್ ಇಂಡೀಸ್ ನಲ್ಲಿ ಸಕ್ಕರೆ ಕಾಯಿಲೆಯನ್ನು ಹತೋಟಿಗೆ ತರಲು ನಿತ್ಯಪುಷ್ಪದ ಎಲೆಗಳನ್ನು ಚಹಾದ ರೂಪದಲ್ಲಿ ಬಳಸಲಾಗುತ್ತದೆ. ಇದರ ಬೇರಿನ ತೊಗಟೆಯು ಅನೇಕ ರಾಸಾಯನಿಕ ಗುಣಧರ್ಮವನ್ನೊಳಗೊಂಡಿದೆ.ಇವೆರಡು ಬಣ್ಣದ ಸಾಮಾನ್ಯ ತಳಿಯ ನಿತ್ಯಪುಷ್ಪ ಸಸ್ಯ ಹೆಚ್ಚು ಔಷಧಿಗಳ ಆಗರ. ಹೂಬಿಡುವ ಹಾಗೂ ಸಸ್ಯದ ಬೆಳವಣಿಗೆಯ ದೃಷ್ಟಿಯಿಂದ ಗಮನಿಸಿದರೂ ಈ ಎರಡು ಬಣ್ಣದ ನಿತ್ಯಪುಷ್ಪ ಸಸ್ಯಗಳು ವಿಶೇಷತೆಯನ್ನೊಳಗೊಂಡಿವೆ. ಇದರಲ್ಲಿ ಅರವತ್ತಕ್ಕೂ ಹೆಚ್ಚು ಬಗೆಯ ಕ್ಷಾರಗಳಿವೆ.ಪ್ರಾಣಿಗಳು ಈ ಸಸ್ಯವನ್ನು ತಿನ್ನುವುದಿಲ್ಲ. ಒಂದು ಸಸ್ಯದ ಆಯಸ್ಸು ಎರಡರಿಂದ ಮೂರು ವರ್ಷಗಳು. ಅಂತೆಯೇ, ಒಂದು ಹೂವು ಅರಳಿದ ಬಳಿಕ ನಾಲ್ಕೈದು ದಿನಗಳ ಕಾಲ ಸೊಬಗಿನಿಂದಿರುತ್ತದೆ.
           ನಿತ್ಯಪುಷ್ಪವು ಎರಡರಿಂದ ಮೂರು ಅಡಿ ಎತ್ತರಕ್ಕೆ ಬೆಳೆಯುತ್ತದೆ. ಹಾಗೂ ಇದರ ಹಲವಾರು ಟೊಂಗೆಗಳು ನೆಲಕ್ಕೆ ಬಿದ್ದು, ಪೊದರು ಪೊದರಾಗಿ ಸುತ್ತಲಿನ ಪ್ರದೇಶವನ್ನಾಕ್ರಮಿಸಿ ಗಿಡದ ತುಂಬಾ ಹೂಬಿಟ್ಟು ಕಂಗೊಳಿಸುತ್ತದೆ.ಇದು ಆರೈಕೆಯಿಲ್ಲದೆಯೇ ವರ್ಷಪೂರ್ತಿ ಹೂಬಿಡುತ್ತದೆ.ಇದರ ಮೊಗ್ಗು ಭರ್ಚಿಯಾಕಾರದಲ್ಲಿರುತ್ತದೆ. ಹೂಗಳು ಒಂದೇ ಬಣ್ಣದ ಹೊರತಾಗಿ, ಮಿಶ್ರ ಬಣ್ಣದಲ್ಲಿಯೂ ಗಮನ ಸೆಳೆಯುತ್ತವೆ. ನಿತ್ಯಪುಷ್ಪದ ಬಲಿತ ಚಿಕ್ಕ ಬೀಜಗಳು ಕಪ್ಪಾಗಿರುತ್ತವೆ. ಪ್ರತೀ ಹೂವಿಗೆ ಒಂದು ಜೊತೆ ಹಸಿರು ಬಣ್ಣದ ಬೀಜಕೋಶಗಳಾಗುತ್ತವೆ. ಇವು ಬಲಿತಾಗ ,ತಾನಾಗಿಯೇ ಒಡೆದು ನೆಲಕ್ಕೆ ಬಿದ್ದು, ನೆಲದ ಸಾಮಾನ್ಯ ತೇವಾಂಶದಲ್ಲಿಯೂ ಮೊಳಕೆಯೊಡೆದು ಬಹುಬೇಗನೆ ಚಿಗುರಿ ಬೆಳೆಯುತ್ತವೆ.
          ಸ್ಮಶಾನ ಮಲ್ಲಿಗೆ ಎಂದು ಕರೆಯಿಸಿಕೊಳ್ಳುವ ಇದು ದೇವರ ಪೂಜೆಗೂ ಬಳಕೆಯಾಗಬಲ್ಲ ಪುಷ್ಪ! ಈ ಹೆಸರಿನ ಕಾರಣದಿಂದಲೇ ಮನೆಯಂಗಳದಲ್ಲಿ ನಿತ್ಯಪುಷ್ಪವನ್ನು ನೆಟ್ಟು ಬೆಳೆಸಬಾರದೆಂಬ ನಂಬಿಕೆಯಿದೆ.ಈ ಹೂವಿಗೆ ಕನ್ನಡ ಭಾಷೆಯಲ್ಲಿ- ಮಸಣ ಮಲ್ಲಿಗೆ, ಸದಾ ಪುಷ್ಪ, ಹೇನು ಹೂವು, ತಿಗಣೆ ಹೂವು, ದಂಡಕ್ಕಿ ಹೂವು ಎನ್ನುತ್ತಾರೆ. ಆಂಗ್ಲ  ಭಾಷೆಯಲ್ಲಿ - ಪೆರಿವಿಂಕಲ್ (Periwinkle), ವಿಂಕಾ ರೋಸೀ (Vinca rosea). ಹಿಂದಿಯಲ್ಲಿ- ಸದಾಬಹಾರ್, ಸದಾ ಸುಹಾಗೀನ್. ಮಲಯಾಳಂ- ಶವಂ ನಾರಿ, ಉಷಮಲಾರಾ. ಮರಾಠಿ- ಸದಾಫೂಲೀ.ಪಂಜಾಬಿ- ರತನ್ಜೋತ್. ಬೆಂಗಾಲಿ- ನಯನತಾರಾ. ತಮಿಳು- ಸದುಕದು ಮಲ್ಲಿಕ್ಕೈ. ತೆಲುಗು- ಬಿಲಾಗನ್ನೇರು.    ಎಂಬ ವಿವಿಧ ಹೆಸರುಗಳಿವೆ. ನಿತ್ಯಪುಷ್ಪವು "ಎಪೊಸೈನೇಸಿಯೇ" (Apocynaceae) ಸಸ್ಯ ಕುಟುಂಬಕ್ಕೆ ಸೇರಿದೆ. ಮತ್ತು ಈ ಹೂವಿನ ವೈಜ್ಞಾನಿಕ ಹೆಸರೆಂದರೆ- "ಕ್ಯಾತರಾಂಥಸ್ ರೋಸಿಯಸ್" (Catharanthus Roseus).
..............................................................
ಬರಹ -- ಭವ್ಯಾ ನೇರಲಜಡ್ಡಿ .
ಚಿತ್ರಗಳು -- ಮಹೇಂದ್ರ ಎಂ.ಹೆಗಡೆ, ಗೋಳಿ.
               ಮತ್ತು
               ಗಜಾನನ ಭಡ್ತಿ.

2 ಕಾಮೆಂಟ್‌ಗಳು: