ಸೂರ್ಯಶಿಖರ

ಫೆಬ್ರವರಿ 29, 2016

" ತೊಟ್ಟಿಲು ತುಂಬೆ ಹೂವು "

                 ತೊಟ್ಟಿಲು ತುಂಬೆಯು ನರ್ತಿಸುವ ಗೊಂಬೆಯಂತೆ ಕಾಣುವ ವಿಭಿನ್ನ ಆಕಾರದ ಪುಷ್ಪ.ಐದು ಎಸಳಿನ ಈ ಹೂವಿಗೆ ಹೃದಯಾಕಾರದ ಬಟ್ಟಲಿನಂತಹ ರಚನೆಯಿರುವ ಕಾರಣ, ಬಟ್ಟಲು ತುಂಬೆ ಎಂದೂ ಕರೆಯಲಾಗುತ್ತದೆ. ನೀಲಿ,ನೇರಳೆ,ಬಿಳಿ,ಗುಲಾಬಿ,ನೀಲಿ ಹಾಗೂ ಬಿಳಿ ಮಿಶ್ರ ಬಣ್ಣ ಹೀಗೆ ಬಗೆ ಬಗೆಯ ಬಣ್ಣಗಳಲ್ಲಿ ತೊಟ್ಟಿಲು ತುಂಬೆ ಹೂವು ಕಾಣಸಿಗುತ್ತದೆ.
               ಸ್ಕ್ರೋಫುಲ್ಯಾರಿಯಸಿ (Scrophulariaceae) ಕುಟುಂಬಕ್ಕೆ ಸೇರಿದ ಇದರ ಸಸ್ಯಶಾಸ್ತ್ರೀಯ ಹೆಸರು ಆಂಜಲೋನಿಯಾ ಆಂಗಸ್ಟಿಫೋಲಿಯಾ (Angelonia Angustifolia). ಇದಕ್ಕೆ ಇಂಗ್ಲೀಷ್ ಭಾಷೆಯಲ್ಲಿ, ವಿಲ್ಲೋಲೀಫ್ ಆಂಜಲೋನಿಯಾ(Willowleaf Angelonia), ನ್ಯಾರೋಲೀಫ್ ಆಂಜಲೋನಿಯಾ (Narrowleaf Angelonia),  ಆಂಜಲ್ ಪ್ಲವರ್ (Angel flower), ಪರ್ಪಲ್ ಫ್ಯಾಷನ್(Purple Pasion) ಎಂದು ಗುರುತಿಸಲಾಗುತ್ತದೆ.ಹೂದೋಟಕ್ಕೆ ಉತ್ತಮವೆನಿಸಿದ ಈ ಪುಷ್ಪದ ತವರೂರು ಮೆಕ್ಸಿಕೋ ಮತ್ತು ವೆಸ್ಟ್ ಇಂಡೀಸ್. ಉಷ್ಣವಲಯ ಹಾಗೂ ತಂಪಾದ ಪ್ರದೇಶದಲ್ಲಿಯೂ ಸೊಂಪಾಗಿ ಬೆಳೆಯುವ ಸಸ್ಯ ಪ್ರಭೇದವಿದು.
               ಸುಟಿಯಾದ ಹಾಗೂ ನೇರವಾದ ಮೃದು ಕಾಂಡಗಳಿಂದ ಕೂಡಿದ  ತೊಟ್ಟಿಲು ತುಂಬೆಯು ದೀರ್ಘಕಾಲಿಕ ಪೊದೆ ಸಸ್ಯ. ಇದರ ಹೂವು ಪಾತರಗಿತ್ತಿಗಳು, ಜೇನುನೊಣಗಳು ಹಾಗೂ ಹಮ್ಮಿಂಗ್ ಬರ್ಡ್ ಗಳನ್ನು ಬಹುವಾಗಿ ಆಕರ್ಷಿಸುತ್ತದೆ. ಪುಷ್ಪವು ಮಂದ ಸುವಾಸನೆಯನ್ನು ಹೊಂದಿದೆ.ವಿಶೇಷವೆಂದರೆ, ಇದರ ಎಲೆ ಹಾಗೂ ಕಾಂಡವು ಅಂಟಿನಂತೆ ಜಿಗಟುತನದಿಂದ ಕೂಡಿದ್ದು ಸೇಬುವಿನ ಸುಗಂಧವನ್ನು ಸೂಸುತ್ತದೆ.
              ತೊಟ್ಟಿಲು ತುಂಬೆಯ ಮೊಗ್ಗು ತಿಳಿ ಹಸಿರು ಹಾಗೂ ನಸು ಕಂದು ಬಣ್ಣದಲ್ಲಿರುತ್ತದೆ. ಹೂವು ಪೂರ್ತಿಯಾಗಿ ಅರಳಲು ಆರರಿಂದ ಎಂಟು ದಿನಗಳು ಬೇಕು. ಕಾಂಡದ ಪ್ರತಿ ಎಲೆಯ ಬುಡದಲ್ಲಿ ಬಿಡಿ ಹಾಗೂ ಜೋಡಿ ಹೂಗಳು ಹಂತ ಹಂತವಾಗಿ ಅರಳಿ ಕಂಗೊಳಿಸುತ್ತವೆ. ಸಾಮಾನ್ಯವಾಗಿ, ಹೂಬಿಡುವ ಕಾಂಡವು ಒಂದೂವರೆ ಅಡಿಯಷ್ಟು ಎತ್ತರಕ್ಕೆ ಬೆಳೆಯುತ್ತದೆ. ಹೂವು ಹಾಗೂ ಮೊಗ್ಗಿನಿಂದ ಆವೃತವಾದ ಕಾಂಡವು ಕದಿರು ಅಥವಾ ಕಸ್ತ್ರ ದಂತೆ ಸುಂದರವಾಗಿ ಕಾಣುತ್ತದೆ. ತಂಪಾದ ವಾತಾವರಣದಲ್ಲಿ ತೊಟ್ಟಿಲು ತುಂಬೆಯ ಆಯಸ್ಸು ಒಂಭತ್ತರಿಂದ ಹತ್ತು ದಿನಗಳು.ಕಾಂಡಕ್ಕೆ ಒಂದೇ ಬಾರಿಗೆ ಮೊಗ್ಗು ಬಿಡುವುದಿಲ್ಲ.ಕಾಂಡದ ತುದಿ ಚಿಗುರಿದಂತೆ ಮೊಗ್ಗು ಗೋಚರಿಸುತ್ತದೆ.
             ಮೂರು ಇಂಚುಗಳಷ್ಟು ಉದ್ದ ಬೆಳೆಯಬಲ್ಲ ಇದರ ಎಲೆಗಳು ಮೊನಚಾಗಿದ್ದು,ಎಲೆಯ ಅಂಚು ಮುಳ್ಳಿನಂತಹ ರಚನೆಯನ್ನು ಹೊಂದಿದೆ.ಆದರೆ ಇದು ಚುಚ್ಚುವುದಿಲ್ಲ. ಎಲೆ ಹಾಗೂ ಕಾಂಡಗಳಿಗೆ ನಾಜೂಕಾದ ರೋಮ ರಚನೆಯಿದೆ. ಸಸ್ಯವು ನಾಲ್ಕು ಅಡಿಯವರೆಗೂ ಬೆಳೆದು ಗಿಡದ ತುಂಬಾ ಹೂಬಿಡುತ್ತದೆ. ಹೂವಿನ ಆಡಿಭಾಗ ಕಡಲಾಮೆಯನ್ನು ಹೋಲುತ್ತದೆ.
            ಉಳಿದೆಲ್ಲಾ ಬಣ್ಣದ ಹೂವಿಗಿಂತ, ಗುಲಾಬಿ ಬಣ್ಣದ ಹೂ ಬಿಡುವ ತೊಟ್ಟಿಲು ತುಂಬೆ ತುಸು ವಿಶಿಷ್ಟವಾದದ್ದು. ಪೊದೆಯು ಪ್ರತಿ ಕಾಂಡಕ್ಕೆ ಬಹು ಟಿಸಿಲೊಡೆದು,ಬಹು ಪೊದೆಯಾಗಿ ನೆಲಕ್ಕೆ ಹರಡಿಕೊಂಡು ಬೆಳೆಯುತ್ತದೆ.ಇದರ ಎಲೆಗಳು ಹಾಗೂ ಕಾಂಡಗಳು ಅಂಟಾಗಿರುವುದಿಲ್ಲ.ಪರಿಮಳವನ್ನೂ ಸೂಸುವುದಿಲ್ಲ. ಇದು ಎಲೆಯ ಬುಡಗಳಲ್ಲಿ ಬಿಡಿ ಹೂಗಳನ್ನು ಹೊಂದಿದ್ದು, ಎಲೆಯು ಎರಡು ಇಂಚಿನಷ್ಟು ಮಾತ್ರ ಉದ್ದವಿರುತ್ತದೆ. ಇನ್ನು , ಬಿಳಿ ಬಣ್ಣದ ಹೂಬಿಡುವ ತೊಟ್ಟಿಲು ತುಂಬೆಯ ಬೇರು ಮನೆಮದ್ದಿನಲ್ಲಿ ಬಳಕೆಯಾಗುತ್ತದೆ.
           ತಂಪಾದ ಪ್ರದೇಶದಲ್ಲಿ ನೆಲಕ್ಕೂರಿದ ಈ ಸಸ್ಯವು ಬೇರು ಬಿಟ್ಟು ಚಿಗುರಿ ಪೊದೆಯಾಗಿ ಬೆಳೆಯುತ್ತದೆ.ಹಾಗೂ ಟಿಸಿಲುಗಳನ್ನು ತೆಗೆದು ನೆಟ್ಟೂ ಸಹ ಸಸ್ಯಾಭಿವೃದ್ಧಿ ಮಾಡಲು ಸಾಧ್ಯ. ತನ್ನ ಹೂವಿನ  ವಿಶಿಷ್ಟ ಆಕೃತಿ ,ಬಣ್ಣ, ಮತ್ತು ಎಲೆ,ಕಾಂಡದ ಪರಿಮಳದಿಂದಲೇ ಈ ಸಸ್ಯವು ಬಹಳ ಜನಪ್ರಿಯ.
..............................................................
ಬರಹ -- ಭವ್ಯಾ ನೇರಲಜಡ್ಡಿ.
ಚಿತ್ರಗಳು-- ವ್ಹಿ. ಎಸ್. ಹೆಗಡೆ.

" ಕುಸುಮಜಾಲಿ ಹೂವು "

                   ಬೀಸುವ ಗಾಳಿಗೆ ಸುತ್ತಲಿನ ಪರಿಸರವನ್ನು ಅತ್ಯಂತ ಪರಿಮಳಯುಕ್ತವಾಗಿಸಬಲ್ಲ ಕುಸುಂಜಾಲಿ ಹೂವು, ಬಹುವಾಗಿ ಜೇನುನೊಣಗಳನ್ನು ಆಕರ್ಷಿಸುವ ಸುಮಧುರ ಪುಷ್ಪ.ಮಿಮೋಸಾಶಿಯಾ(Mimosaceae) ಸಸ್ಯಕುಟುಂಬಕ್ಕೆ ಸೇರಿದ ಇದರ ಸಸ್ಯಶಾಸ್ತ್ರೀಯ ಹೆಸರು ಅಕೇಶಿಯಾ ಫಾರ್ನೇಸಿಯಾನಾ(Acacia farnesiana).ಆಯುರ್ವೇದದಲ್ಲಿ ಶಿಂಬಿ ಕುಲ (Shimbi kul)ಕ್ಕೆ ಸೇರಿದ ಪುಷ್ಪವೆಂದು ಗುರುತಿಸಲಾಗಿದ್ದು,ಇದನ್ನು ಬ್ಲ್ಯಾಕ್ ಬಬೂಲ್ (Black Babool) ಎಂದೂ ಕರೆಯುತ್ತಾರೆ. ಇದರ ತವರೂರು ಪಶ್ಚಿಮ ಏಷ್ಯಾ. ಸಮಶೀತೋಷ್ಣ, ಉಷ್ಣವಲಯದಲ್ಲಿಯೂ ಸೊಕ್ಕಿ ಬೆಳೆವ ಬಹುವಾರ್ಷಿಕ ಸಸ್ಯವಿದು. ಈ ಗಿಡಗಳಿಗೆ ಆರೈಕೆ ಬೇಕೆಂಬುದಿಲ್ಲ.
                   ಸಾಮಾನ್ಯವಾಗಿ, ಕನ್ನಡದಲ್ಲಿ-ಕರಿಜಾಲಿ, ಕುಸುಮಜಾಲಿ,ಸಣ್ಣಜಾಲಿ, ಜಾಲಿ,ಮುಳ್ಳುಜಾಲಿ,ಕುಸುಂಜಾಲಿ. ಇಂಗ್ಲೀಷ್ ನಲ್ಲಿ-ಮಿಮೋಸ ಬುಶ್,ನೀಡಲ್ ಬುಶ್,ಕ್ಯಾಸಿ ಫ್ಲವರ್,ಐರನ್ ವುಡ್, ಫ್ರೇಗ್ರಂಟ್ ಅಕೇಸಿಯಾ,ಸ್ವೀಟ್ ಅಕೇಶಿಯಾ,ಸ್ವೀಟ್ ವಾಟಲ್. ಹಿಂದಿಯಲ್ಲಿ-ಗಂಧ ಬಬೂಲ್, ವಿಲಾಯತಿ ಕಿಕರ್,ಗುಹ್ ಬಬೂಲ್. ಮಲಯಾಳಂ-ಕರಿವೀಲಮ್,ಪಿವೇಲಮ್.ತಮಿಳು-ಕಸ್ತೂರಿವೇಲಮ್, ಕಾದಿವೇಲ್,ಪಿಕ್ಕರುವೇಲ್.ತೆಲುಗು-ಕಂಪುತುಮ್ಮ,ನಲ್ಲತುಮ್ಮ. ಸಂಸ್ಕೃತ-ಮರುದೃಮ. ಆಸ್ಸಾಮೀ -ತರ್ವಾ ಕದಮ್. ಓರಿಯಾ-ಕಾಪುರ್.ಮಣಿಪುರಿ-ಚಿಗಾಂಗ್ ಲೇ. ಮರಾಠಿ-ಗುಕಿಕರ್,ಬಬೂಳ್,ಡಿಯೋಬಬೂಲ್ .ಬೆಂಗಾಳಿ-ಗುಯಾಬಬುಲ್.ಗುಜರಾಥಿ-ಗಂಧೇಲೋ ಬಬೂಲ್.ಹೀಗೆ ವಿವಿಧ ಭಾಷೆಗಳಲ್ಲಿ ಕುಸುಮಜಾಲಿ ಹೂವು ಜನಪ್ರಿಯ.
                  ಐದರಿಂದ ಇಪ್ಪತ್ತು ಅಡಿಯವರೆಗೂ ಬೆಳೆಯಬಲ್ಲ ಕುಸುಂಜಾಲಿ ಗಿಡಕ್ಕೆ ಟಿಸಿಲುಗಳು ಹಲವಾರು.ಎಳೆಯ ಟಿಸಿಲುಗಳು ಕಂದು ಬಣ್ಣದಲ್ಲಿರುತ್ತವೆ. ಹೆಚ್ಚು ಹೂವು ಬಿಡುವುದೂ ಇವುಗಳಿಗೇ! ಗಿಡದ ತುಂಬಾ ಚೂಪಾದ ಮುಳ್ಳುಗಳಿರುತ್ತವೆ.ಒಂದೂವರೆ ಇಂಚಿನಷ್ಟು ಉದ್ದದವರೆಗೂ ಬೆಳವಣಿಗೆ ಹೊಂದುವ ಮುಳ್ಳು ಬೂದುಬಣ್ಣದಲ್ಲಿರುತ್ತದೆ.ಆದರೆ ಇದರ ಮೊನಚಾದ ತುದಿ ಕಂದು ಬಣ್ಣದಲ್ಲಿದ್ದು ವಿಶಿಷ್ಟವಾಗಿದೆ. ಹೂವಿನ ಪರಿಮಳ ಹಾಗೂ ಸೊಬಗಿನಿಂದಲೇ ಈ ಸಸ್ಯ ಹೆಸರುವಾಸಿ.ಗಾಢ ಹಸಿರು ಬಣ್ಣದ ಎಲೆಯ ಆಕಾರವೂ ವಿಶಿಷ್ಟವಾಗಿದ್ದು ಪುಟ್ಟ ಪುಟ್ಟ ಎಲೆಗಳ ಗೊಂಚಲಿನಂತಿದ್ದು ಗರಿಯನ್ನು ಹೋಲುತ್ತದೆ. ಪ್ರತೀ ಸೆಂಟಿಮೀಟರ್ ಗಳ ಅಂತರದಲ್ಲಿ ಎಳೆಯ ಕಾಂಡಕ್ಕೆ, ಒಂದು ಜೊತೆ ಉದ್ದವಾದ ,ಇಂಗ್ಲೀಷ್ ನ V ಆಕಾರದಲ್ಲಿ ಹೊಂದಿಕೊಂಡ ಚೂಪಾದ ಜೋಡಿ ಮುಳ್ಳು, ನಾಲ್ಕೈದು ಎಲೆಗಳು, ಹಾಗೆಯೇ ಎರಡರಿಂದ ಐದು ಸುಂದರ ಕುಸುಮಜಾಲಿಗಳು ಅರಳುತ್ತವೆ. ಚಳಿಗಾಲದಲ್ಲಿ ಹಚ್ಚಹಸಿರಿನ ಗಿಡದ ತುಂಬಾ ಹೂವುಗಳು ಅರಳಿ ಕಂಪನ್ನು ಸೂಸುತ್ತವೆ.
                 ಚಿಕ್ಕ ಚಿಕ್ಕ ಎಳೆಯ ಸೂಕ್ಷ್ಮವಾದ ಕಡ್ಡಿಯಂತಹ ದಳಗಳಿಂದ ಆವೃತವಾದ, ಗಾಢ ಹಳದಿ ಬಣ್ಣದ ವೃತ್ತಾಕಾರದ ಪುಟ್ಟ ಹೂವು ಕುಸುಂಜಾಲಿ. ಮಣಿಯಂತೆ ಕಾಣುವ ಇದರ ಮೊಗ್ಗು ತಿಳಿ ಹಸಿರು ಬಣ್ಣದಲ್ಲಿರುತ್ತದೆ. ಇದು ಅರಳಲು ಐದರಿಂದ ಆರು ದಿನಗಳು ಬೇಕು. ಪೂರ್ತಿಯಾಗಿ ಅರಳಿದ ಘಮಘಮಿಸುವ ಬಿಡಿಯಾದ ಹೂವುಗಳು ಎರಡೇ ದಿನದಲ್ಲಿ ಹಳಸಿ ತಿಳಿಯಾದ ಬಣ್ಣ ಹೊಂದಿ ಉದುರಿಹೋಗುತ್ತವೆ.ದಕ್ಷಿಣ ಭಾರತದಲ್ಲಿ ಕುಸುಂಜಾಲಿ ಹೂವುಗಳನ್ನು ದೇವತಾರಾಧನೆಯಲ್ಲಿ ಬಳಸುತ್ತಾರೆ.ಮತ್ತು ಹೆಂಗಳೆಯರು ಈ ಹೂವಿನ ತೊಟ್ಟುಗಳನ್ನೇ ಬಳ್ಳಿಯಂತೆ ಬಳಸಿ ನೇಯ್ದು ದಂಡೆ ಮಾಡಿ ಮುಡಿಗೇರಿಸಿಕೊಳ್ಳುತ್ತಾರೆ.
                  ಕುಸುಂಜಾಲಿಯ ಪ್ರತಿ ಹೂವಿಗೆ ಗರಿಷ್ಟ ಮೂರು ತಿಳಿ ಹಸಿರು ಬಣ್ಣದ ಕಾಯಿ ಬಿಡುತ್ತದೆ.ಇದು ಬಲಿತು ಒಣಗಿದಾಗ ಕಂದು ಬಣ್ಣಕ್ಕೆ ತಿರುಗುತ್ತದೆ.ಇದರೊಳಗಿನ 20-25 ಚಿಕ್ಕ ಚಿಕ್ಕ ಬೀಜಗಳೂ ಸಹ ಕಾಯಿಯೊಳಗಿನ ಅಂಟಿನಂತಹ ದ್ರವದಿಂದಾಗಿ ಸುವಾಸನೆ ಬೀರುತ್ತವೆ.ಬೀಜಗಳು ಮಕ್ಕಳ ಆಟಿಕೆಯ ದಾಳವಾಗಿಯೂ ಬಳಕೆಯಾಗುತ್ತವೆ. ಹಸಿಯಾದ ಕಾಯಿಯನ್ನು ಕತ್ತರಿಸಿದರೆ ಅದರಿಂದ ಹಳದಿ ಬಣ್ಣದ ದ್ರವ ಬರುತ್ತದೆ. ಅಂತೆಯೇ, ಒಣಗಿದ ಕಾಯಿಯನ್ನು ಬಿರಿದರೆ ಅದರ ಪದರಕ್ಕಿರುವ ಅಂಟು ಕಟುವಾದ ಪರಿಮಳವನ್ನು ಹೊರಸೂಸುತ್ತದೆ. ಈ ಬೀಜಗಳು ಸೌಂದರ್ಯವರ್ಧಕ ತೈಲಗಳಲ್ಲಿಯೂ, ಎಲೆಗಳು- ಕೂದಲಿನ ಸಮಸ್ಯೆ,ಜ್ವರ,ಸಕ್ಕರೆ ಕಾಯಿಲೆ,ಕಣ್ಣಿನ ತೊಂದರೆ, ಉದರದ ಸಮಸ್ಯೆಗೆ ನಾಟೀ ಔಷಧಗಳಲ್ಲಿ ಬಳಕೆಯಾಗುತ್ತವೆ. ಇದರ ಟೊಂಗೆಗಳನ್ನು ಹಲ್ಲುಜ್ಜುವ ಸಾಧನವಾಗಿಯೂ ಬಳಸಲಾಗುತ್ತದೆ. ಕಾರಣ,ವಸಡನ್ನು ಗಟ್ಟಿಗೊಳಿಸಬಲ್ಲ ಔಷಧೀಯ ಗುಣ ಈ ಸಸ್ಯಕ್ಕಿದೆ.
                  ಬಲಿತ ಕುಸುಂಜಾಲಿ ಕಾಯಿ ತಾನಾಗಿಯೇ ಒಡೆದು, ಬಿದ್ದ ಬೀಜಗಳು ಮಳೆಗಾಲದ ಮಣ್ಣಿನ ತೇವಾಂಶದಲ್ಲಿ ಮೊಳೆತು ಚಿಗುರುತ್ತವೆ.ಸಾಮಾನ್ಯವಾಗಿ, ಎರಡರಿಂದ ಮೂರು ವರ್ಷಗಳಲ್ಲಿ ಕುಸುಮಜಾಲಿ ಗಿಡ ಹೂಬಿಡಲು ಪ್ರಾರಂಭಿಸುತ್ತದೆ. ಕೆಲವೊಮ್ಮೆ ಮೂರರಿಂದ ನಾಲ್ಕು ಅಡಿಯ ಚಿಕ್ಕ ಸಸ್ಯಗಳೂ ಸಹ ಗಿಡದ ತುಂಬಾ ಹೂಬಿಟ್ಟು ನೋಡುಗರನ್ನು ಸೆಳೆಯುತ್ತವೆ. ಕರಿಜಾಲಿ ಗಿಡಕ್ಕೆ ರೋಗಬಾಧೆ ಕಡಿಮೆ. ಆದ್ದರಿಂದ ವರ್ಷಪೂರ್ತಿ ಹಸಿರಾಗಿಯೇ ಇರುತ್ತದೆ. ಕೆಲವು ವೇಳೆ ಹಳೆಯದಾದ ಗಿಡಗಳಿಗೆ ಕೀಟಬಾಧೆಯಿಂದ ಇಡೀ ಗಿಡದ ಕಾಂಡಗಳಿಗೆ ಕೊಟ್ಟಿ ಹಿಡಿದು,ಗಿಡವು ಅಂಟಿನಂತಹ ರಸವನ್ನು ಹೊರಸೂಸಿ,ತೇವಾಂಶ ಕಳೆದುಕೊಂಡು ಒಣಗಿ ಆಯುಷ್ಯ ಕಳೆದುಕೊಳ್ಳುತ್ತದೆ. ಒಮ್ಮೊಮ್ಮೆ ಅರ್ಧ ಗಿಡಕ್ಕೆ ಮಾತ್ರ ಇಂತಹ ಸಮಸ್ಯೆ ಉಂಟಾದರೆ ಗಿಡಕ್ಕೆ ಅಪಾಯವಿಲ್ಲ.ಯಥಾಪ್ರಕಾರ ಚಿಗುರೊಡೆಯುತ್ತದೆ.
..............................................................
ಚಿತ್ರ ಬರಹ -- ಭವ್ಯಾ ನೇರಲಜಡ್ಡಿ.

ಫೆಬ್ರವರಿ 12, 2016

" ಅಂದದ ಹೂವು- ಗುಲಾಬಿ"

             "ರೋಸಾಸಿಯಾ" ಕುಟುಂಬಕ್ಕೆ ಸೇರಿದ ಗುಲಾಬಿ ಹೂವಿನ ಸಸ್ಯಶಾಸ್ತ್ರೀಯ ಹೆಸರು "ರೋಸಾ". ಸಾಮಾನ್ಯವಾಗಿ, ಕನ್ನಡದಲ್ಲಿ-ಗುಲಾಬಿ, ಇಂಗ್ಲೀಷ್ ನಲ್ಲಿ -ರೋಸ್, ಹಿಂದಿ ಮತ್ತು ಮಣಿಪುರಿ ಭಾಷೆಗಳಲ್ಲಿ-ಗುಲಾಬ್, ತಮಿಳಿನಲ್ಲಿ -ರೋಜಾ ಎಂದು ಗುರುತಿಸಲಾಗುತ್ತದೆ.ಇದು ಹೂವುಗಳ ರಾಣಿಯೆಂದೇ ಪ್ರಸಿದ್ಧ!
            ನೇರವಾದ ಹಸಿರು ಕಾಂಡಗಳಿಗೆ , ಒತ್ತೊತ್ತಾಗಿ ಚೂಪಾದ ಮುಳ್ಳುಗಳನ್ನು ಹೊಂದಿದ್ದು,ಏಳು ಅಡಿಯವರೆಗೂ ಬೆಳೆಯಬಲ್ಲ ಗುಲಾಬಿ ಗಿಡಗಳು ದೀರ್ಘಕಾಲಿಕ ಪೊದೆಸಸ್ಯಗಳಾಗಿವೆ. ಸಮಶೀತೋಷ್ಣ ಪ್ರದೇಶ ಹಾಗೂ ತಂಪಾದ ವಾತಾವರಣದಲ್ಲಿ ಹಚ್ಚ ಹಸಿರಿನಿಂದ ಸೊಕ್ಕಿ ಬೆಳೆಯಬಲ್ಲ ಗುಲಾಬಿ ಯಲ್ಲಿ ತಳಿಗಳು ಸಾವಿರಾರು. ನೀಲಿ ಹಾಗೂ ಕಡುಗಪ್ಪು ಬಣ್ಣಗಳನ್ನು ಹೊರತುಪಡಿಸಿ, ನೂರಕ್ಕೂ ಹೆಚ್ಚಿನ ಬಣ್ಣಗಳಲ್ಲಿ ಹೂವುಗಳು ಕಾಣಸಿಗುತ್ತವೆ.
          ಗುಲಾಬಿ ಹೂವುಗಳ ತವರೂರು ಪರ್ಷಿಯಾದ ಕೊಲ್ಲಿ ಭಾಗಗಳು. ಏಷ್ಯಾದಲ್ಲಿ ಬಿಳಿ,ಹಳದಿ,ಕೆಂಪು ಬಣ್ಣದ ಹೂವುಗಳನ್ನು ಗುರುತಿಸಲಾದರೆ, ಉಳಿದಂತೆ ಇತರ ಬಣ್ಣದ ಹೂವುಗಳನ್ನು ಯೂರೋಪ್,ದಕ್ಷಿಣ ಅಮೇರಿಕಾ ಮತ್ತು ವಾಯುವ್ಯ ಆಫ್ರಿಕಾ ಖಂಡಗಳಲ್ಲಿಯೂ ಗುರುತಿಸಲಾಗಿದೆ.
         ಮುಖ್ಯವಾಗಿ, ಕೆಂಪು ಗುಲಾಬಿ ಇಂಗ್ಲೆಂಡ್ ನ ರಾಷ್ಟ್ರೀಯ ಪುಷ್ಪ. ಅಲ್ಲಿನ ಸೇಂಟ್ ಜಾರ್ಜ್ ದಿನದ ಆಚರಣೆಯಲ್ಲಿ ಈ ಹೂವಿಗೆ ವಿಶೇಷ ಬೇಡಿಕೆ. ಅಲ್ಲದೇ, ಸೇಂಟ್ ವ್ಯಾಲಂಟೈನ್ ನ ದಿನದಂದು ಪ್ರೇಮದ ಸಂಕೇತವಾಗಿ ಕೆಂಪು ಗುಲಾಬಿ ವ್ಯಾಪಕ ಜನಾಧರಣೀಯ ಪುಷ್ಪ.
         ಗುಲಾಬಿ ಹೂವನ್ನು ಅತ್ಯಂತ ಆಕರ್ಷಣೀಯ ಹಾಗೂ ಸುವಾಸಿತ ಪುಷ್ಪವೆಂದು ಅನೇಕ ಕಾರಣಗಳಿಗಾಗಿ ಬಳಸಲಾಗುತ್ತದೆ. ದೇಸೀ ತಳಿಗಳಲ್ಲಿ ಅತ್ಯಂತ ಪರಿಮಳಯುಕ್ತ ಗುಲಾಬಿ ಹೂವುಗಳಿವೆ. ಸುಂದರ ಹಾಗೂ ಪರಿಮಳಯುಕ್ತ ನಾಟಿ ಗುಲಾಬಿಗಳಲ್ಲಿ ಪನ್ನೀರು ಗುಲಾಬಿ ಜನಪ್ರಿಯ. ಆಹ್ಲಾದಕರ ಸುಗಂಧ ದ್ರವ್ಯಗಳ ತಯಾರಿಕೆಯಲ್ಲಿ, ಜೆಲ್ಲಿ,ತೈಲ,ಅತ್ತರ್,ಗುಲ್ಕನ್, ಸೌಂದರ್ಯ ವರ್ಧಕಗಳ ತಯಾರಿಕೆಯಲ್ಲಿ, ಆಹಾರ ಉತ್ಪನ್ನಗಳು ಹಾಗೂ ಪಾನೀಯಗಳ ಸ್ವಾದಗಳಲ್ಲಿ ಗುಲಾಬಿ ವಿಶೇಷವಾಗಿ ಬಳಕೆಯಾಗುತ್ತದೆ.
          ಗುಲಾಬಿ ದಳಗಳನ್ನು ಸಂಸ್ಕರಿಸಿ ತಯಾರಿಸುವ ಉತ್ಪನ್ನಗಳ ಪ್ರಯೋಗ ಪರ್ಷಿಯಾದಿಂದ ಹುಟ್ಟಿಕೊಂಡು, ನಂತರ ಅರೇಬಿಯಾ ಮತ್ತು ಭಾರತದಲ್ಲಿಯೂ ವ್ಯಾಪಿಸಿತು. ಸೋಜಿಗದ ಸಂಗತಿಯೆಂದರೆ,ಸುಮಾರು ಎರಡು ಸಾವಿರ ಗುಲಾಬಿ ಹೂವುಗಳನ್ನು ಬಳಸಿ ಒಂದು ಗ್ರಾಂ ತೈಲವನ್ನು ತಯಾರಿಸಬಹುದೆಂದು ಅಂದಾಜಿಸಲಾಗಿದೆ.
          ಗುಲಾಬಿ ಹೂಗಳಿಂದ ತಯಾರಿಸುವ ರೋಸ್ ವಾಟರ್ ವಿಶಿಷ್ಟ ಪರಿಮಳವನ್ನು ಹೊಂದಿದ್ದು , ಇದನ್ನು ಬಹುವಾಗಿ ಪರ್ಷಿಯನ್ನರು ಬಳಸುತ್ತಾರೆ. ಫ್ರಾನ್ಸ್ ನಲ್ಲಿ ಗುಲಾಬಿ ದಳಗಳಿಂದ ತಯಾರಿಸಿದ ರೋಸ್ ಸಿರಫ್ ನ್ನು ಹೆಚ್ಚಾಗಿ ಬಳಸುತ್ತಾರೆ.ಭಾರತದಲ್ಲಿ ಐಸ್ ಕ್ರೀಂ ಮತ್ತು ಕುಲ್ಫಿಗಳ ಪರಿಮಳಕ್ಕಾಗಿ ಸುವಾಸಿತ ಗುಲಾಬಿ ಬಳಕೆಯಾಗುತ್ತದೆ.ಕೆಲವು ತಳಿಯ ಗುಲಾಬಿಗಳಿಗೆ ಹಣ್ಣು ಬಿಡುತ್ತದೆ. ಇವುಗಳಲ್ಲಿ ವಿಟಾಮಿನ್ -ಸಿ  ಅಂಶವಿರುವುದರಿಂದ ಇದರಿಂದ ತಯಾರಿಸಿದ ತೈಲಗಳನ್ನು ಚರ್ಮ ಹಾಗೂ ಸೌಂದರ್ಯವರ್ಧಕಗಳಲ್ಲಿ ಬಳಸಲಾಗುತ್ತದೆ.
         ಸಾಮಾನ್ಯವಾಗಿ, ಮನೆಯ ಹೂದೋಟಗಳಲ್ಲಿ ನೆಟ್ಟು ಬೆಳೆನುವ ದೇಸೀ ತಳಿಯ ಗುಲಾಬಿ ಹೂಗಳು ಚಿಕ್ಕದಾಗಿರುತ್ತವೆ.ವರ್ಷ ಪೂರ್ತಿ ಹೂವು ಬಿಡುವ ಸಸ್ಯಗಳಿವು.ಇದರಲ್ಲಿ ಕೆಲವು ಗುಲಾಬಿ ಗಿಡಗಳಿಗೆ ಮುಳ್ಳು ಇರುವುದೇ ಇಲ್ಲ. ಕೆಲವು ಹೂಗಳು ಚಿಕ್ಕದಾಗಿದ್ದು ಗೊಂಚಲಿನಲ್ಲಿ ಹೂಬಿಟ್ಟರೆ, ಇನ್ನು ಕೆಲವು ಬಿಡಿ ಹೂಗಳು.ಮಿಶ್ರಿತ ಬಣ್ಣದಲ್ಲಿಯೂ, ವಿವಿಧ ಆಕಾರದಲ್ಲಿಯೂ ಗಿಡದ ತುಂಬಾ ಹೂ ಬಿಟ್ಟು ಕಂಗೊಳಿಸಿದರೂ ಎರಡರಿಂದ ಮೂರು ದಿನಗಳಲ್ಲಿಯೇ ಬಣ್ಣ ಬದಲಿಸುತ್ತಾ ಪೂರ್ತಿಯಾಗಿ ಅರಳಿ, ಗುಲಾಬಿ ಹೂವುಗಳು ಹಳಸಿ ಉದುರಿ ಹೋಗುತ್ತವೆ. ಆದರೆ, ಹೈಬ್ರಿಡ್ ಗುಲಾಬಿ ಹೂವುಗಳು ಬಹಳ ದಿನಗಳ ಕಾಲ ಮೊಗ್ಗಿನಂತೆಯೇ ಇದ್ದು ಕೆಡದೇ ಉಳಿಯುತ್ತವೆ."ಡಾಗ್ ರೋಸ್" ಎಂದು ಗುರುತಿಸಲಾಗುವ ಹೂವು ಬಿಡದ ಗುಲಾಬಿ ಗಿಡವನ್ನು ಗುಲಾಬಿ ಕಸಿಯ ಮೂಲ ಗಿಡವನ್ನಾಗಿ ಬಳಸುತ್ತಾರೆ. ಕ್ರಿ.ಪೂ ಐದುನೂರರ ಸಂದರ್ಭದಲ್ಲಿ ಅಲಂಕಾರಿಕ ಗುಲಾಬಿಗಳನ್ನು ಪರ್ಷಿಯಾ ಹಾಗೂ ಚೀನಾ ದೇಶಗಳು , ಬಹುಬೇಗನೇ ಬೆಳೆಯಬಹುದಾದ ಹೈಬ್ರಿಡ್ ಗುಲಾಬಿ ಗಿಡಗಳನ್ನು  ಹೂವಿನ ಸಸ್ಯವೆಂದು ವಿಶೇಷವಾಗಿ ಅಭಿವೃದ್ಧಿಪಡಿಸಿದವು.
           ದಟ್ಟವಾದ ವರ್ಣರಂಜಿತ ಗುಲಾಬಿ ಹೂವುಗಳನ್ನು ಹೈಬ್ರಿಡ್ ಗಿಡಗಳಲ್ಲಿ ಮಾತ್ರ ಕಾಣಬಹುದು.ಇಂತಹ ಗಿಡಗಳು ಬೇಗನೇ ಬೆಳವಣಿಗೆ ಹೊಂದುತ್ತವೆ.ಮತ್ತು ಅಷ್ಟೇ ಆರೈಕೆಯನ್ನು ಅಪೇಕ್ಷಿಸುವ ಹೂದೋಟದ ವಾಣಿಜ್ಯ ಪುಷ್ಪವೂ ಹೌದು. ಮಾರಾಟಕ್ಕಾಗಿ ಬೆಳೆಸುವ ಗುಲಾಬಿ ಯನ್ನು ನಾಜೂಕಿನಿಂದ ಬೆಳೆಸಿ, ಹೂಗಳನ್ನು ಕೊಯ್ದು ದೇಶಾದ್ಯಂತ ವರ್ಗಾಯಿಸಲಾಗುತ್ತದೆ. ಹೂದೋಟದ ಸೌಂದರ್ಯಕ್ಕಷ್ಟೇ ಅಲ್ಲದೇ, ಸಭೆ -ಸಮಾರಂಭಗಳಲ್ಲಿ ಒಳಾಂಗಣ ವಿನ್ಯಾಸಕ್ಕಾಗಿ, ಪೂಜೆ- ಮಂಗಲ ಕಾರ್ಯಗಳಲ್ಲಿ ಶ್ರೇಷ್ಟವಾದ ಪುಷ್ಪವಾಗಿ ಗುಲಾಬಿ ಹೂವು ಹೆಸರುವಾಸಿ.
..............................................................
ಬರಹ--ಭವ್ಯಾ ನೇರಲಜಡ್ಡಿ.
ಚಿತ್ರಗಳು-- ಪ್ರದೀಪ ಹೆಗಡೆ.

ಫೆಬ್ರವರಿ 10, 2016

"ಗೆಂಟಿಗೆ ಹೂವು"

                 ಸಾಮಾನ್ಯವಾಗಿ ಹಳ್ಳಿಯ ಮನೆಯಂಚಿನಲ್ಲಿ, ಹೂದೋಟಗಳಲ್ಲಿ ಅಲಂಕಾರಕ್ಕಾಗಿ ಗೆಂಟಿಗೆ ಗಿಡವನ್ನು ಬೆಳೆಸುತ್ತಾರೆ.ಇದು ಹೂ ಬಿಡುವುದು ಆಶ್ವೀನ ಮಾಸದಲ್ಲಿ. ನವರಾತ್ರಿಯ ಶಾರದೆಯ ಪೂಜೆಗೆ ಶ್ರೇಷ್ಟವಾದ ಪುಷ್ಪವಿದು. ತಮಿಳುನಾಡು ಮತ್ತು ದಕ್ಷಿಣ ಭಾರತದಲ್ಲಿ ಈ ಹೂಗಳನ್ನು ಹೆಂಗಳೆಯರು ಮಾಲೆ,ದಂಡೆಗಳನ್ನಾಗಿ ಮಾಡಿ ಮದುವೆ- ಮುಂಜಿ ಆದಿಯಾಗಿ ಎಲ್ಲಾ ಸಂದರ್ಭಗಳಲ್ಲಿಯೂ ತಮ್ಮ ಮುಡಿಗೇರಿಸಿ ಅಲಂಕರಿಸಿಕೊಳ್ಳುತ್ತಾರೆ.
                ಅಕ್ಯಾಂಥೇಶಿ (Acanthaceae ) ಕುಟುಂಬಕ್ಕೆ ಸೇರಿದ ಗೆಂಟಿಗೆ ಹೂವಿನ ವೈಜ್ಞಾನಿಕ ಹೆಸರು "ಬಾರ್ಲೇರಿಯಾ ಟರ್ಮಿನಾಲಿಸ್" (Barleria Terminalis). ಗಾಢ ಪರಿಮಳಯುಕ್ತ ಪುಷ್ಪವಲ್ಲದ ಗೆಂಟಿಗೆಗೆ ತನ್ನದೇ ಆದ ವಿಶಿಷ್ಟ ಸುವಾಸನೆಯಿದೆ. ಹಳದಿ,ಬಿಳಿ,ತಿಳಿನೀಲಿ,ತಿಳಿ ನೇರಳೆ, ತಿಳಿಗುಲಾಬಿ,ನೇರಳೆ,ಗುಲಾಬಿ,ನೀಲಿ ಬಿಳಿ ಮಿಶ್ರಿತ ಪಟ್ಟೆ, ಕೆಂಪು ಮಿಶ್ರಿತ ನೀಲಿ ಬಣ್ಣಗಳಲ್ಲಿ  ಗೆಂಟಿಗೆ ಹೂವು ಅರಳಿ ನಿಂತು ನೋಡುಗರ ಕಣ್ಮನ ಸೆಳೆಯುತ್ತದೆ.
            ಗೆಂಟಿಗೆಯಲ್ಲಿ ನೂರಾ ಎಂಭತ್ತು ಪ್ರಬೇಧಗಳಿವೆ.ಆದರೆ, ಭಾರತದಲ್ಲಿ ಮೂವತ್ತು ಪ್ರಬೇಧಗಳನ್ನು ಮಾತ್ರ ಗುರುತಿಸಲಾಗಿದೆ.ಇದರ ಕೆಲವು ಪ್ರಬೇಧಗಳು ಕಾಡುಗಳಲ್ಲಿಯೂ ಬೆಳೆಯುತ್ತವೆ ಎನ್ನುವುದು ವಿಶೇಷ. ಸಾಮಾನ್ಯವಾಗಿ ಸಮಶೀತೋಷ್ಣ, ಉಷ್ಣವಲಯದಲ್ಲಿಯೂ ಬಹು ಟಿಸಿಲುಗಳನ್ನೊಳಗೊಂಡು ಸೋಂಪಾಗಿ ಬೆಳೆಯುವ  ಪೊದೆ ಸಸ್ಯಗಳಿವು. ಕರ್ನಾಟಕದಲ್ಲಿ ಹೆಚ್ಚಾಗಿ ಕೃಷಿ ಮಾಡಿರುವ ಪ್ರಮುಖವಾದ ಎರಡು ವರ್ಗಗಳ ಪೈಕಿ ಹಳದಿ ಹೂ ಬಿಡುವ ಸಸ್ಯ ಬಾರ್ಲೇರಿಯಾ ಪ್ರಿಯೊಂಟಿಸ್ (Barleria prionitis) ಒಂದಾದರೆ, ಅಂತೆಯೇ ಇನ್ನುಳಿದ ಬಣ್ಣಗಳಲ್ಲಿ ಹೂ ಬಿಡುವ ಗೆಂಟಿಗೆ ಸಸ್ಯಗಳು ಬಾರ್ಲೇರಿಯಾ ಕ್ರಿಸ್ಟಾನಾ ( Barleria cristana) ಜಾತಿಗೆ ಸೇರಿವೆ.

ಬಾರ್ಲೇರಿಯಾ ಪ್ರಿಯೊಂಟಿಸ್ (Barleria prionitis) :--

                ಸಂಸ್ಕೃತದಲ್ಲಿ -ಕುರಂಟಾ, ಮರಾಠಿಯಲ್ಲಿ -ವಜ್ರದಂತಿ ಎಂದು ಕರೆಯಲ್ಪಡುವ ಹಳದಿ ಗೆಂಟಿಗೆಯ ತವರೂರು ಭಾರತ, ಶ್ರೀಲಂಕಾ ಮತ್ತು ಪೂರ್ವ-ದಕ್ಷಿಣ- ಹಾಗೂ ಮಧ್ಯ ಆಫ್ರಿಕಾ. ಇದನ್ನು Porcupine flower (ಹಂದಿ ಮುಳ್ಳು ಹೂವು) ,ಮುಳ್ಳು ಗೋರಂಟಿ, ಮುಳ್ಳು ಮದರಂಗಿ ,ಗುಬ್ಬಿ ಮುಳ್ಳು ಗಿಡ, ಕಿಂಕಿರಾತ, ಎಂದೂ ಕರೆಯುತ್ತಾರೆ.
               ಚಿಗುರಿನ ತುದಿಗೆ ಪ್ರತೀಬಾರಿ ಹೂಬಿಡುವಾಗಲೂ ಎರಡು ಬಿಡಿ ಹೂಗಳು ಬುಡದಲ್ಲಿ ರಕ್ಷಾಕವಚದೊಂದಿಗೆ ಅರಳುತ್ತವೆ. ಈ ಸಸ್ಯದ ಎತ್ತರ ಎಲ್ಲಾ ತರಹದ ಭೂಮಿಯಲ್ಲಿಯೂ ಒಂದೇ ರೀತಿ ಇದ್ದು ಸಾಮಾನ್ಯವಾಗಿ ನಾಲ್ಕರಿಂದ ಐದು ಅಡಿ ಎತ್ತರಕ್ಕೆ ಬೆಳೆಯುತ್ತವೆ.ನೀಳವಾದ ಹಾಗೂ ಗಾಢ ಹಸಿರು ಬಣ್ಣದ  ನಯವಾದ ಎಲೆಗಳನ್ನು ಹೊಂದಿದ ಹಳದಿ ಗೆಂಟಿಗೆಗೆ ಪ್ರತಿ ಎಲೆಯ ಬುಡದ ಕಾಂಡಕ್ಕೆ ಎರಡರಿಂದ ನಾಲ್ಕು ಚೂಪಾದ ಮುಳ್ಳುಗಳು ಇರುತ್ತವೆ.
              ಹಳದಿ ಗೆಂಟಿಗೆಯು ಆಯುರ್ವೇದದಲ್ಲಿ ವಿವಿಧ ಔಷಧಿಗಳಿಗಾಗಿ ಬಳಕೆಯಾಗುತ್ತದೆ.ಇದರ ಎಲೆಯ ರಸವನ್ನು, ಮಳೆಗಾಲದಲ್ಲಿ ಉಂಟಾಗುವ ಚರ್ಮದ ನಂಜಿನ ತೊಂದರೆಗೆ ಬಳಸಲಾಗುತ್ತದೆ. ಅಂತೆಯೇ ಕಹಿ ರುಚಿಯ ಈ ಗೆಂಟಿಗೆ ಎಲೆಯ ರಸವು ವಾತ,ಕಫ,ಕುಷ್ಟ,ಬಾವು,ಹುಣ್ಣು,ಕೀಟ ಕಡಿದ ಗಾಯ,ಹೇನು,ಕೂದಲ ಸಮಸ್ಯೆಗೆ ಮನೆಮದ್ದಾಗಿ ಬಳಸಲಾಗುತ್ತದೆ.
          ಪುಷ್ಪದ ಎರಡು ಕೇಸರದಳಗಳು ಹೊರಚಾಚಿಕೊಂಡಂತೆ ಇದ್ದು , ಐದು ಎಸಳಿನ ಈ ಹೂವು ಬಾಯ್ದೆರೆದು ನಾಲಿಗೆ ಹೊರ ಚಾಚಿದ ಜೀವಿಯಂತೆ ಕಂಡುಬರುತ್ತದೆ. ಸಿಂಹಳದಲ್ಲಿ ಗೆಂಟಿಗೆಗೆ "ಕಾಟು ಕರಂಡು" ಎನ್ನುತ್ತಾರೆ.

ಬಾರ್ಲೇರಿಯಾ ಕ್ರಿಸ್ಟಾನಾ ( Barleria cristana):--

           ಭಾರತ, ಉತ್ತರ ಚೀನಾ ಮತ್ತು ಮಯನ್ಮಾರ್ ದೇಶಗಳಲ್ಲಿ ಹೆಚ್ಚಾಗಿ ಕಂಡುಬರುವ ಗೆಂಟಿಗೆ ಹೂವುಗಳ  ಬಾರ್ಲೇರಿಯಾ ಕ್ರಿಸ್ಟಾನಾ ( Barleria cristana)  ಜಾತಿಯಲ್ಲಿ ಫಿಲಿಫೈನ್ ವೈಲೆಟ್ (philippine violet), ಬ್ಲೂಬೆಲ್ ಬಾರ್ಲೇರಿಯಾ (bluebell barleria), ಕ್ರಿಸ್ಟೆಡ್ ಫಿಲಿಫೈನ್ ವೈಲೆಟ್ (crested philippine violet), ಬ್ಲೂ ಬಾರ್ಲೇರಿಯಾ (blue barleria) ಪ್ರಮುಖವಾದವುಗಳು. ಇವುಗಳನ್ನೂ ಗೆಂಟಿಗೆ ಹೂವುಗಳೆಂದೇ ಕರೆಯಲಾಗುತ್ತದೆ. ಪೊದೆಗಳು ಚಿಗುರೊಡೆದು ಹೂ ಬಿಡುವಾಗ ಗೊಂಚಲಿನಂತೆ ಗಿಡದ ತುಂಬಾ ಕಂಗೊಳಿಸುತ್ತವೆ. ಈ ಹೂವಿನ ಬುಡದಲ್ಲಿ ರಕ್ಷಾ ಪತ್ರಗಳಿದ್ದು ಅವು ಒಣಗಿದ ಮೇಲೆ ಮುಳ್ಳಿನಂತೆ ಚುಚ್ಚುತ್ತವೆ. ಗಾಢ ಹಸಿರಿನ ದೀರ್ಘ ಅಂಡಾಕಾರದ ಎಲೆಗಳನ್ನು ಹೊಂದಿದ ಗೆಂಟಿಗೆಯ ಹೂವು ಐದು ಸೆಂ.ಮೀ ಉದ್ದವಿದ್ದು ಕೊಳವೆಯಂತೆ ಕಾಣುತ್ತದೆ.ಇದು ಎರಡು ದಿನಗಳ ಕಾಲ ಕೆಡದೇ ಉಳಿಯುವ ಸೊಬಗಿನ ಪುಷ್ಪ. ಈ ಗೆಂಟಿಗೆ ಸಸ್ಯಗಳಿಗೆ ಮರಾಠಿಯಲ್ಲಿ "ಕೋರಾಂಠಿ"  ಎಂದು ಕರೆಯುತ್ತಾರೆ.
           ಒಟ್ಟಿನಲ್ಲಿ, ಈ ಎಲ್ಲಾ ಪ್ರಬೇಧದ ಗೆಂಟಿಗೆ ಸಸ್ಯವನ್ನು ಒಟ್ಟುಗೂಡಿಸಿ ಅದಕ್ಕೆ ಕನ್ನಡದಲ್ಲಿ ಗೊರಟೆ, ಸ್ಪಟಿಕ, ಜಟಕ ಸಸ್ಯವೆಂದು ಹೀಗೆ ಹಲವಾರು ಹೆಸರುಗಳಿಂದ ಗುರುತಿಸಲಾಗುತ್ತದೆ. ಸಾಮಾನ್ಯವಾಗಿ ಈ ಎಲ್ಲಾ ವಿಧದ ಗೆಂಟಿಗೆ ಸಸ್ಯದ ಕಾಂಡವು ನಯವಾದ ಗಿಣ್ಣುಗಳಿಂದ ಕೂಡಿದ್ದು ಬಹಳ ಸುಟಿಯಾಗಿದೆ. ಅಂಡಾಕಾರದ ಗಟ್ಟಿಯಾದ ಕಂದುಬಣ್ಣದ ಬಲಿತ ಬೀಜಕೋಶಗಳಲ್ಲಿ (capsules) ಎರಡರಿಂದ ನಾಲ್ಕು ಬೀಜಗಳಿರುತ್ತವೆ. ಬೀಜಗಳಿಂದ, ಟಿಸಿಲುಗಳನ್ನು ,ಬೇರು ಇರುವ ಕಾಂಡಗಳನ್ನು ಸಹ ನೆಟ್ಟು ಸಸ್ಯಾಭಿವೃದ್ಧಿ ಮಾಡಲಾಗುತ್ತದೆ.
               ಅತಿಯಾಗಿ ನೀರನ್ನು ಆಶ್ರಯಿಸದ ಈ ಸಸ್ಯಗಳು ಹೆಚ್ಚು ಆರೈಕೆಯನ್ನೂ ಬಯಸುವುದಿಲ್ಲ. ಆದರೆ ತಂಪಾದ ಪ್ರದೇಶದಲ್ಲಿ ವರ್ಷವಿಡೀ ಹೂ ಬಿಡುವ ಸಸ್ಯ ಪ್ರಬೇಧಗಳಿವು.ಈ ಗಿಡಗಳಿಗೆ ರೋಗಬಾಧೆ ಕಡಿಮೆಯಿರುವ ಕಾರಣ , ಬಹಳ ವರ್ಷಗಳವರೆಗೆ ಸಂರಕ್ಷಿಸಬಹುದಾದ ಸಸ್ಯವಿದು.
..............................................................
ಬರಹ--ಭವ್ಯಾ ನೇರಲಜಡ್ಡಿ.
ಚಿತ್ರಗಳು-- ಪ್ರದೀಪ ಹೆಗಡೆ.

ಫೆಬ್ರವರಿ 04, 2016

"ಕಾನನದ ಸೊಬಗು - ಗೌರಿ ಹೂವು"

                       ಕಾನನದಲ್ಲಿ ಸ್ವಚ್ಛಂದವಾಗಿ ಬೆಳೆದು,ಉಳಿದೆಲ್ಲಾ ಹೂಗಳಿಗಿಂತ ವಿಭಿನ್ನವಾದ ಎಸಳುಗಳನ್ನು ಹೊಂದಿರುವ "ಗೌರಿಹೂವು" ಕನ್ನಡದಲ್ಲಿ "ಇಂದ್ರನ ಬಳ್ಳಿ" ಎಂದೂ ಕರೆಯಲ್ಪಡುತ್ತದೆ. ಲಾಂಗಲೀ ಎಂಬ ಸಂಸ್ಕೃತ ಹೆಸರು, ಇದರ ಬೇರು  ನೇಗಿಲಿನಂತಿದೆ ಎಂದು ವಿವರಿಸುತ್ತದೆ.ಮರಾಠಿ ಹಾಗೂ ಸಂಸ್ಕೃತದಲ್ಲಿ "ಅಗ್ನಿಶಿಖಾ" , ತೆಲುಗಿನಲ್ಲಿ "ಅಗ್ನಿಸಿಖಾ", ಹಿಂದಿಯಲ್ಲಿ "ಕಲಿಹಾರೀ" ಎಂಬ ಹೆಸರಿನಲ್ಲಿ ಗುರುತಿಸಲ್ಪಡುವ  ಈ ಸುಂದರ ಪುಷ್ಪದ ಪರ್ಯಾಯ ಹೆಸರೆಂದರೆ, "ಗ್ಲೋರಿಯಸ್ ಲಿಲ್ಲಿ" (Gloriosa Lily) ಹಾಗೂ "ಹುಲಿಪಂಜ" ( Tiger clow). ಜಿಂಬಾಬ್ವೆಯ ರಾಷ್ಟ್ರೀಯ ಪುಷ್ಪವಾಗಿರುವ  "ಗ್ಲೋರಿ ಲಿಲ್ಲಿ" (Glory lily), ಭಾರತದಲ್ಲಿ ತಮಿಳುನಾಡಿನ  ರಾಜ್ಯಪುಷ್ಪ  "ನಾಭಿ" , "ಅಗ್ನಿಶಿಖೆ" ಯಾಗಿದೆ. ಸಸ್ಯಶಾಸ್ತ್ರೀಯ ಹೆಸರಿನಲ್ಲಿ "ಗ್ಲೋರಿಯಸ್ ಸುಪರ್ಬಾ" (Gloriosa Superba) ಎಂದು ಹೇಳಲಾಗುವ ಇಂದ್ರನ ಬಳ್ಳಿಯು  ದೀರ್ಘಕಾಲಿಕ ಸಸ್ಯವಾದರೂ, ಹಚ್ಚಹಸಿರಿನಿಂದ ಚಿಗುರಿ ಹೂಬಿಟ್ಟು ಕಂಗೊಳಿಸುವುದು ಮಾತ್ರ  ಭಾದ್ರಪದ ಮಾಸದಲ್ಲಿ. ಕರ್ನಾಟಕದಲ್ಲಿ ವಿಶೇಷವಾಗಿ 'ಗಣೇಶ ಚತುರ್ಥಿ" ಯ  ಸಂದರ್ಭದಲ್ಲಿಯೇ ಹೂ ಬಿಡುವುದರಿಂದ ಚೌತಿ ಹಬ್ಬದ ಗೌರಿ ಪೂಜೆಯಲ್ಲಿ ಶ್ರೇಷ್ಠ ಪುಷ್ಪವೆಂದು, ಅಗ್ನಿಶಿಖೆ ವಿಶೇಷ ಮರ್ಯಾದೆಗೆ ಪಾತ್ರವಾಗಿದೆ.ಬೇರಿನ ಮೂಲಕ ಬೆಳವಣಿಗೆ ಹೊಂದಿ ಬಳ್ಳಿಯಂತೆ ಹಬ್ಬುವ ಈ ಸಸ್ಯವು ಗ್ಲೋರಿಯಸ್ ಸಸ್ಯವರ್ಗಕ್ಕೆ ಸೇರಿದೆ. ಉಷ್ಣವಲಯದ ಕಾಡುಗಳಲ್ಲಿ ಹಾಗೂ ಕರ್ನಾಟಕದ ಪಶ್ಚಿಮ ಘಟ್ಟಗಳ ಕಾಡುಗಳಲ್ಲಿ ಹೆಚ್ಚಾಗಿ ಕಾಣಸಿಗುತ್ತದೆ.
              ಬಳ್ಳಿಯು ಮೂರರಿಂದ ನಾಲ್ಕು ಟಿಸಿಲೊಡೆದು ಚಿಗುರಿ ಬೆಳೆಯುತ್ತದೆ.ಈ ಚಿಗುರುಗಳೇ ಕ್ರಮೇಣ ತೊಟ್ಟಿಲ್ಲದ ಎಲೆಗಳಾಗಿ ಬೆಳವಣಿಗೆ ಹೊಂದುತ್ತವೆ.ಎರಡರಿಂದ ಮೂರು ಇಂಚುಗಳಷ್ಟು ಉದ್ದವಿರುವ ಎಲೆಯು ಭರ್ಚಿಯ ಆಕಾರದಲ್ಲಿದ್ದು, ಎಲೆಯ ಮೊನಚಾದ ತುದಿಯು ಸುರುಳಿಯಾಗಿರುತ್ತದೆ.ಚಿಗುರೊಡೆದ ಪ್ರತೀ ಟಿಸಿಲಿನ (ಹೆಣೆ,ಟೊಂಗೆ) ಕೊನೆ ಕೊನೆಗೆ, ಪ್ರತೀ ಎಲೆಯ ಬುಡದಲ್ಲಿ ಒಂದರಂತೆ, ಒಟ್ಟೂ ಹತ್ತರಿಂದ ಹದಿನೈದು ಅಗ್ನಿಶಿಖೆಗಳು ಉದ್ದವಾದ ತೊಟ್ಟಿಗೆ ಅರಳುತ್ತವೆ. ಪ್ರಾರಂಭದಲ್ಲಿ, ಮೊಗ್ಗು ತಿಳಿ ಹಸಿರು ಬಣ್ಣದಲ್ಲಿರುತ್ತದೆ.ಕ್ರಮೇಣ ಅರಳಿದಂತೆ ಹೂವಿನ ಬುಡ ಹಳದಿ ಬಣ್ಣಕ್ಕೆ ತಿರುಗುತ್ತದೆ.ತುದಿ ಗಾಢ ಕೆಂಪು ವರ್ಣದಲ್ಲಿ ಕಂಗೊಳಿಸುತ್ತದೆ.ವಿಶೇಷವೆಂದರೆ, ಮುರುಟಿಕೊಂಡಂತೆ ಕಾಣುವ ಆರು ಎಸಳುಗಳುಳ್ಳ ಅಗ್ನಿಶಿಖೆಯು, ಬಳ್ಳಿಯ ಮೇಲೆ  ಆರಂಟು ದಿನಗಳ ಕಾಲ ಸೊಬಗಿನಿಂದ ಕಂಗೊಳಿಸುತ್ತದೆ.ಮೂರ್ನಾಲ್ಕು ದಿನಕ್ಕೆ ಪೂರ್ಣವಾಗಿ ಅರಳುವ ಇದು ಕ್ರಮೇಣ ಮತ್ತೆರಡು ದಿನಗಳಲ್ಲಿ ಹೂವಿನ ಬುಡದಲ್ಲಿ ಕೇಸರಿ ಬಣ್ಣ ಪಡೆದಿರುತ್ತದೆ.ಕೊನೆಗೆ ಪೂರ್ಣ ಹೂವೂ ಕೆಂಪಾಗಿ ಆಯುಷ್ಯ ಕಳೆದುಕೊಳ್ಳುತ್ತದೆ.ಹೂವಿನ ಇನ್ನೊಂದು ವಿಶೇಷ ಆಕರ್ಷಣೆ ತಳಭಾಗದಲ್ಲಿರುವ ಹೂವಿನ ಕೇಸರ ದಳ!
                ಇಪ್ಪತ್ತು ಅಡಿ ಎತ್ತರದವರೆಗೂ ಈ ಸಸ್ಯ ಬಳ್ಳಿಯಂತೆ ಹಬ್ಬುತ್ತದೆ.ಇದರ ಬೇರು ಆಯುರ್ವೇದ ಹಾಗೂ ಇತರ ವೈದ್ಯಕೀಯ ಪದ್ಧತಿಗಳಲ್ಲಿ  ಉಪಯುಕ್ತವಾಗಿದೆ. ಇದರ ರಾಸಾಯನಿಕ ಸಂಘಟನೆಯೂ ಕೂಡಾ ಕುತೂಹಲಕರವಾಗಿದೆ. ಬೇರಿನಲ್ಲಿ ಕೋಲ್ಚಿಕಿನ್ (colchicine)ಎಂಬ ಅಂಶ (0.2 -- 0.3 ಶೇ) ವಿರುವುದರಿಂದ ವಿಷದಂತೆ ಕ್ರಿಯೆ ಮಾಡುತ್ತದೆ. ಇದರೊಂದಿಗೆ ಮಿಶ್ರವಾಗಿರುವ  Gloriosine ಎಂಬ ಇನ್ನೊಂದು ಅಂಶವು ಇದರ ತೀಕ್ಣತೆಗೆ ನೆರವಾಗುತ್ತದೆ. ರುಚಿಗೆ ಕ್ಷಾರ ಹಾಗೂ ಕಹಿಯಾಗಿರುವ ಇದರ ಬೇರು ಉಷ್ಣವೀರ್ಯ ಹೊಂದಿರುತ್ತದೆ. ಇದರ ಪ್ರಭಾವದಿಂದ ಗರ್ಭಪಾತವಾಗುತ್ತದೆಯೆಂದು ಆಚಾರ್ಯ ಚರಕರು ಅಭಿಪ್ರಾಯ ಪಡುತ್ತಾರೆ.ಈ ಕಾರಣದಿಂದಲೇ ಸಂಸ್ಕೃತದಲ್ಲಿ ಗರ್ಭಪಾತಿನೀ, ಗರ್ಭನುತ್ ಎಂದೂ ಅಗ್ನಿಶಿಖೆಯನ್ನು ಗುರುತಿಸಲಾಗಿದೆ. ಅಂತೆಯೇ, ದೇಹಕ್ಕೆ ಮುಳ್ಳು ಅಥವಾ ಬಾಣದ ಮೊನೆ ಇತ್ಯಾದಿ ಏನಾದರೂ ಸೇರಿಕೊಂಡಿದ್ದರೆ ಬೇರಿನ ಲೇಪನದಿಂದ ಆ ಮುಳ್ಳು ಹೊರಬರುತ್ತದೆಯೆಂಬ ಕಾರಣಕ್ಕೆ ಕಲಿಹಾರೀ ಎಂದೂ ಕರೆಯಲಾಗುತ್ತದೆ. ತಾಯಿಯನ್ನು ಹೊಡೆದವನ ಕೈ ಈ ಹೂವಿನ ಎಸಳಿನಂತೆ ಪರಿವರ್ತನೆಯಾಗುತ್ತದೆಯೆಂದು ತುಳುನಾಡಿನ ಹಳ್ಳಿಗರು ಕಥೆಯಾಗಿ ಹೇಳುತ್ತಾರೆ!  ಬಂಗಾಲಿಗಳು ಈ ಹೂವಿಗೆ ಉಲಟ ಚಂಡಾಲ, ಮಿಲಾಂಗುಲಿ ಎಂಬ ಹೆಸರಿನಿಂದ ಕರೆದರೆ, ಮರಾಠಿಯಲ್ಲಿ ಕಳಲಾವೀ,ವಾಘಚಬಕಾ. ಸಂಸ್ಕೃತದಲ್ಲಿ ಅಗ್ನಿಮುಖಿ, ಹಿಂದಿಯಲ್ಲಿ ಬಚನಾಗ,ಕಲಿಹಾರೀ,ಉಲಟ ಚಂದಲ್.ತೆಲುಗಿನಲ್ಲಿ ಅಧವಿನಾಭಿ.ಮಲಯಾಳಂನಲ್ಲಿ ಮೇದೊನೀ,ತಮಿಳಿನಲ್ಲಿ ಕಾಂದಲ್ ಹೀಗೆ ಅನೇಕ ಹೆಸರುಗಳು ಈ ಹೂವಿಗೆ ಇವೆ.
                    ಸುಶ್ರುತ ಸಂಹಿತೆಯಲ್ಲಿ- ಅಗ್ನಿಶಿಖೆಯ ಬೇರಿನ ಕಲ್ಕವನ್ನು ಕೈ ಕಾಲುಗಳ ತಳಭಾಗಕ್ಕೆ ಹಚ್ಚಬೇಕೆಂಬ ಉಲ್ಲೇಖವಿದೆ.ಬಾವು,ಹುಣ್ಣು, ಮೂಲವ್ಯಾಧಿ,ಗಂಡಮಾಲಾ (ಗಳಗಂಡ),  ಮತ್ತು ಕಫ ಸಂಬಂಧಿತ ಚರ್ಮ ರೋಗಗಳಲ್ಲಿ ಇದರ ಲೇಪನ ಉಪಯುಕ್ತ. ಇದು ಕ್ರಿಮಿಗಳನ್ನು (anti bacterial) ನಿವಾರಿಸುತ್ತದೆ.ಅಲ್ಪ ಪ್ರಮಾಣದಲ್ಲಿ  (250--500 ಮಿ.ಗ್ರಾಂ) ಬೇರಿನ ಔಷಧಿಯ ಸೇವನೆಯಿಂದ  ಅಗ್ನಿಮಾಂದ್ಯ, ಪಿತ್ತವಿಕಾರ,ಮತ್ತು ಕ್ರಿಮಿ ದೋಷಗಳು ನಿವಾರಣೆಯಾಗುತ್ತವೆ. ಸೇವಿಸುವ ಪ್ರಮಾಣವು ಆರು ಗ್ರಾಂ ಕ್ಕಿಂತ ಅಧಿಕವಾದೊಡನೆ  ತೀವ್ರವಾದ ಹೊಟ್ಟೆನೋವು, ಮತ್ತು ಹೃದಯಾಘಾತವಾಗಿ ಮರಣ ಸಂಭವಿಸುತ್ತದೆ. ಅಲ್ಲದೇ ವಾಂತಿ- ಬೇಧಿಯನ್ನುಂಟುಮಾಡಿ  ಜಠರದಲ್ಲಿ ತೀವ್ರ ದಾಹ ಮತ್ತು ಕ್ಷೋಭೆಯನ್ನುಂಟುಮಾಡುತ್ತದೆ.ಲಾಂಗಲೀ ರಸಾಯನ ಮತ್ತು ಕಾಸೀಸಾದಿ ತೈಲಗಳಲ್ಲಿ "ಅಗ್ನಿಶಿಖೆ"ಯ ಬೇರು  ಪ್ರಮುಖ ಘಟಕವಾಗಿದೆ. ರಕ್ತದಲ್ಲಿ ಸೇರಿಕೊಂಡಿರುವ ಕಫದ ಅಂಶವನ್ನು  ನಿವಾರಿಸುವುದರಿಂದ ಈ ಸಸ್ಯ ರಕ್ತ ಶೋಧಕ್ಕೆ ಸಹಾಯಕಾರಿ.ಇದರಿಂದಾಗಿ ಕುಷ್ಠ ರೋಗದಂತಹ ಚರ್ಮ ರೋಗಗಳೂ ಕೂಡಾ ಗುಣ ಹೊಂದುತ್ತವೆ.ಹಾಗೂ ವಿಷಮ ಶೀತ ಜ್ವರದಲ್ಲಿ ಇದರ ಪ್ರಯೋಗವು  ಪರಿಣಾಮಕಾರಿ ಎಂಬುದಾಗಿ ಪಾರಂಪರಿಕ ವೈದ್ಯ ವಿಜ್ಞಾನವು ನಂಬುತ್ತದೆ.
..............................................................
ಬರಹ--ಭವ್ಯಾ ನೇರಲಜಡ್ಡಿ.
ಚಿತ್ರಗಳು-- ಪ್ರದೀಪ ಹೆಗಡೆ.