ಎಲ್ಲಾ ತರಹದ ಮಣ್ಣಿನ ಗುಣಧರ್ಮ ಹಾಗೂ ಹವಾಮಾನಕ್ಕೆ ಒಗ್ಗಿಕೊಂಡು ಬೆಳೆಯುವ ನಿತ್ಯಪುಷ್ಪವು ನಿತ್ಯವೂ ಹೂಬಿಡುವ ಸಸ್ಯಪ್ರಬೇಧ. ಆದ್ದರಿಂದಲೇ ಈ ಹೂವಿಗೆ ನಿತ್ಯಪುಷ್ಪ ಎಂಬ ಹೆಸರಿನಿಂದ ಕರೆಯುತ್ತಾರೆ. ವೆಸ್ಟ್ ಇಂಡೀಸ್ ದ್ವೀಪ ಸಮುದಾಯವು ಈ ಹೂವಿನ ತವರೂರು. ಮೂರು ಶತಮಾನಗಳೀಚೆಗೆ ಭಾರತಕ್ಕೆ ಪ್ರವೇಶಿಸಿದ್ದಾದರೂ, ಇಂದು ಇದು ಭಾರತದಾದ್ಯಂತ ಕಾಣಸಿಗುವ ಔಷಧಿ ಸಸ್ಯವಾಗಿದೆ.
ಭಾರತದಲ್ಲಿ, ಸಮುದ್ರದಂಚಿನ ಪ್ರದೇಶಗಳಲ್ಲಿ ತಾನಾಗಿಯೇ ಬೆಳೆಯುವ ಈ ಸಸ್ಯವರ್ಗದಲ್ಲಿ ಪ್ರಮುಖವಾಗಿ ಕಂಡುಬರುವುದು ಗುಲಾಬಿ ಮಿಶ್ರಿತ ತಿಳಿ ನೇರಳೆ ಮತ್ತು ಬಿಳಿ ಬಣ್ಣದ ಹೂವುಗಳು. ಕ್ರಮೇಣ ಹೂದೋಟಗಳಲ್ಲಿ, ಮನೆಯಂಗಳದಲ್ಲಿ ಸ್ಥಾನ ಪಡೆದ ನಿತ್ಯಪುಷ್ಪ ಗಳು ಇಪ್ಪತ್ತಕ್ಕೂ ಹೆಚ್ಚಿನ ಬಣ್ಣಗಳಲ್ಲಿ ಅರಳುತ್ತವೆ. ಒಂದೇ ಹೂವಿನ ಬೀಜಕೋಶದ ಬೀಜಗಳನ್ನು ಭಿತ್ತಿದರೆ, ಹುಟ್ಟಿದ ಬೇರೆ ಬೇರೆ ಗಿಡಗಳಲ್ಲಿ ವಿವಿಧ ಬಣ್ಣದ ಹೂವು ಬಿಡುವುದು ಈ ಸಸ್ಯದ ವಿಶೇಷತೆ. ಸಾಮಾನ್ಯವಾಗಿ, ಒಂದೇ ತರಹದ ಹೋಲಿಕೆಯುಳ್ಳ ಹೂವುಗಳು ಅರಳುವ ಸಸ್ಯದ ಭಾಗಗಳು ನಯವಾಗಿರುತ್ತವೆ.ಆದರೆ, ವಿವಿಧ ಬಣ್ಣದ ನಿತ್ಯಪುಷ್ಪದ ಸಸ್ಯಗಳು ಅದರಲ್ಲಿಯೂ ಅಭಿವೃದ್ಧಿ ಹೊಂದಿದ ತಳಿಯ ಸಸ್ಯಗಳು ತುಸು ರೋಮ ರಚನೆಯನ್ನೊಳಗೊಂಡಿರುತ್ತವೆ.
ಐದು ಎಸಳಿನ ಹೂವು, ದೀರ್ಘ ಅಂಡಾಕೃತಿಯ ಗಾಢ ಹಸಿರು ಬಣ್ಣದ ಎಲೆ, ಒಂದೇ ಹೂವಿಗೆ ಬಿಡುವ ಹಲವಾರು ಬೀಜಗಳನ್ನೊಳಗೊಂಡ ಹಸಿರು ಬಣ್ಣದ ಜೋಡಿ ಬೀಜಕೋಶಗಳು, ಮೃದುವಾದ ಕಾಂಡ, ಬೇರು ಹೀಗೆ ಈ ಸಸ್ಯದ ಎಲ್ಲಾ ಭಾಗಗಳೂ ಅತ್ಯಂತ ಕಹಿಯಾಗಿವೆ. ಆದ್ದರಿಂದಲೇ ಈ ಸಸ್ಯದ ಎಲ್ಲಾ ಭಾಗಗಳೂ ಔಷಧಿಯುಕ್ತ. ವೆಸ್ಟ್ ಇಂಡೀಸ್ ನಲ್ಲಿ ಸಕ್ಕರೆ ಕಾಯಿಲೆಯನ್ನು ಹತೋಟಿಗೆ ತರಲು ನಿತ್ಯಪುಷ್ಪದ ಎಲೆಗಳನ್ನು ಚಹಾದ ರೂಪದಲ್ಲಿ ಬಳಸಲಾಗುತ್ತದೆ. ಇದರ ಬೇರಿನ ತೊಗಟೆಯು ಅನೇಕ ರಾಸಾಯನಿಕ ಗುಣಧರ್ಮವನ್ನೊಳಗೊಂಡಿದೆ.ಇವೆರಡು ಬಣ್ಣದ ಸಾಮಾನ್ಯ ತಳಿಯ ನಿತ್ಯಪುಷ್ಪ ಸಸ್ಯ ಹೆಚ್ಚು ಔಷಧಿಗಳ ಆಗರ. ಹೂಬಿಡುವ ಹಾಗೂ ಸಸ್ಯದ ಬೆಳವಣಿಗೆಯ ದೃಷ್ಟಿಯಿಂದ ಗಮನಿಸಿದರೂ ಈ ಎರಡು ಬಣ್ಣದ ನಿತ್ಯಪುಷ್ಪ ಸಸ್ಯಗಳು ವಿಶೇಷತೆಯನ್ನೊಳಗೊಂಡಿವೆ. ಇದರಲ್ಲಿ ಅರವತ್ತಕ್ಕೂ ಹೆಚ್ಚು ಬಗೆಯ ಕ್ಷಾರಗಳಿವೆ.ಪ್ರಾಣಿಗಳು ಈ ಸಸ್ಯವನ್ನು ತಿನ್ನುವುದಿಲ್ಲ. ಒಂದು ಸಸ್ಯದ ಆಯಸ್ಸು ಎರಡರಿಂದ ಮೂರು ವರ್ಷಗಳು. ಅಂತೆಯೇ, ಒಂದು ಹೂವು ಅರಳಿದ ಬಳಿಕ ನಾಲ್ಕೈದು ದಿನಗಳ ಕಾಲ ಸೊಬಗಿನಿಂದಿರುತ್ತದೆ.
ನಿತ್ಯಪುಷ್ಪವು ಎರಡರಿಂದ ಮೂರು ಅಡಿ ಎತ್ತರಕ್ಕೆ ಬೆಳೆಯುತ್ತದೆ. ಹಾಗೂ ಇದರ ಹಲವಾರು ಟೊಂಗೆಗಳು ನೆಲಕ್ಕೆ ಬಿದ್ದು, ಪೊದರು ಪೊದರಾಗಿ ಸುತ್ತಲಿನ ಪ್ರದೇಶವನ್ನಾಕ್ರಮಿಸಿ ಗಿಡದ ತುಂಬಾ ಹೂಬಿಟ್ಟು ಕಂಗೊಳಿಸುತ್ತದೆ.ಇದು ಆರೈಕೆಯಿಲ್ಲದೆಯೇ ವರ್ಷಪೂರ್ತಿ ಹೂಬಿಡುತ್ತದೆ.ಇದರ ಮೊಗ್ಗು ಭರ್ಚಿಯಾಕಾರದಲ್ಲಿರುತ್ತದೆ. ಹೂಗಳು ಒಂದೇ ಬಣ್ಣದ ಹೊರತಾಗಿ, ಮಿಶ್ರ ಬಣ್ಣದಲ್ಲಿಯೂ ಗಮನ ಸೆಳೆಯುತ್ತವೆ. ನಿತ್ಯಪುಷ್ಪದ ಬಲಿತ ಚಿಕ್ಕ ಬೀಜಗಳು ಕಪ್ಪಾಗಿರುತ್ತವೆ. ಪ್ರತೀ ಹೂವಿಗೆ ಒಂದು ಜೊತೆ ಹಸಿರು ಬಣ್ಣದ ಬೀಜಕೋಶಗಳಾಗುತ್ತವೆ. ಇವು ಬಲಿತಾಗ ,ತಾನಾಗಿಯೇ ಒಡೆದು ನೆಲಕ್ಕೆ ಬಿದ್ದು, ನೆಲದ ಸಾಮಾನ್ಯ ತೇವಾಂಶದಲ್ಲಿಯೂ ಮೊಳಕೆಯೊಡೆದು ಬಹುಬೇಗನೆ ಚಿಗುರಿ ಬೆಳೆಯುತ್ತವೆ.
ಸ್ಮಶಾನ ಮಲ್ಲಿಗೆ ಎಂದು ಕರೆಯಿಸಿಕೊಳ್ಳುವ ಇದು ದೇವರ ಪೂಜೆಗೂ ಬಳಕೆಯಾಗಬಲ್ಲ ಪುಷ್ಪ! ಈ ಹೆಸರಿನ ಕಾರಣದಿಂದಲೇ ಮನೆಯಂಗಳದಲ್ಲಿ ನಿತ್ಯಪುಷ್ಪವನ್ನು ನೆಟ್ಟು ಬೆಳೆಸಬಾರದೆಂಬ ನಂಬಿಕೆಯಿದೆ.ಈ ಹೂವಿಗೆ ಕನ್ನಡ ಭಾಷೆಯಲ್ಲಿ- ಮಸಣ ಮಲ್ಲಿಗೆ, ಸದಾ ಪುಷ್ಪ, ಹೇನು ಹೂವು, ತಿಗಣೆ ಹೂವು, ದಂಡಕ್ಕಿ ಹೂವು ಎನ್ನುತ್ತಾರೆ. ಆಂಗ್ಲ ಭಾಷೆಯಲ್ಲಿ - ಪೆರಿವಿಂಕಲ್ (Periwinkle), ವಿಂಕಾ ರೋಸೀ (Vinca rosea). ಹಿಂದಿಯಲ್ಲಿ- ಸದಾಬಹಾರ್, ಸದಾ ಸುಹಾಗೀನ್. ಮಲಯಾಳಂ- ಶವಂ ನಾರಿ, ಉಷಮಲಾರಾ. ಮರಾಠಿ- ಸದಾಫೂಲೀ.ಪಂಜಾಬಿ- ರತನ್ಜೋತ್. ಬೆಂಗಾಲಿ- ನಯನತಾರಾ. ತಮಿಳು- ಸದುಕದು ಮಲ್ಲಿಕ್ಕೈ. ತೆಲುಗು- ಬಿಲಾಗನ್ನೇರು. ಎಂಬ ವಿವಿಧ ಹೆಸರುಗಳಿವೆ. ನಿತ್ಯಪುಷ್ಪವು "ಎಪೊಸೈನೇಸಿಯೇ" (Apocynaceae) ಸಸ್ಯ ಕುಟುಂಬಕ್ಕೆ ಸೇರಿದೆ. ಮತ್ತು ಈ ಹೂವಿನ ವೈಜ್ಞಾನಿಕ ಹೆಸರೆಂದರೆ- "ಕ್ಯಾತರಾಂಥಸ್ ರೋಸಿಯಸ್" (Catharanthus Roseus).
..............................................................
ಬರಹ -- ಭವ್ಯಾ ನೇರಲಜಡ್ಡಿ .
ಚಿತ್ರಗಳು -- ಮಹೇಂದ್ರ ಎಂ.ಹೆಗಡೆ, ಗೋಳಿ.
ಮತ್ತು
ಗಜಾನನ ಭಡ್ತಿ.
"ಸೂರ್ಯಶಿಖರ"
ಜೂನ್ 15, 2016
" ನಿತ್ಯಪುಷ್ಪ ".
"ಕಿಂಕರ ಹೂವು".
ಬೇಲಿಯಂಚಿನಲ್ಲಿ ಹಾಗೂ ಕಂಪೌಂಡಿನ ಬದಿಯಲ್ಲಿ ಅಲಂಕಾರಿಕ ಹೂವಿನ ಸಸ್ಯವಾಗಿ ಕಿಂಕರ ಗಿಡವನ್ನು ನೆಟ್ಟು ಬೆಳೆಸಲಾಗುತ್ತದೆ. ಇದು ಉಷ್ಣವಲಯ ಹಾಗೂ ಸಮಶೀತೋಷ್ಣ ವಲಯ ಇವೆರಡರಲ್ಲಿಯೂ ಸೊಂಪಾಗಿ ಬೆಳೆಯಬಲ್ಲದು.ವರ್ಷದಲ್ಲಿ ಹತ್ತು ತಿಂಗಳು ಹಂತ ಹಂತವಾಗಿ ಹೂಬಿಡುವ ಸುಂದರ ಪುಷ್ಪ ಕಿಂಕರ ಹೂವು.ದೇವರ ಪೂಜೆಗೂ ಬಳಕೆಯಾಗಬಲ್ಲದು.ಹೆಂಗಳೆಯರ ಮುಡಿಯನ್ನೂ ಸಿಂಗರಿಸಬಲ್ಲ ಈ ಹೂವಿಗೆ ಗಿಡವೇ ಭೂಷಣ ಎಂದರೂ ತಪ್ಪಲ್ಲ. ಕಾರಣ, ವಿಶಿಷ್ಟವಾದ ಈ ಹೂವಿನ ಎಸಳು! .
ಆಂಗ್ಲ ಭಾಷೆಯಲ್ಲಿ " ಡ್ವಾರ್ಫ್ ಪೌಡರ್ ಪಫ್" (Dwarf powder puff), "ಮಿನಿಯೇಚರ್ ಪೌಡರ್ ಪಫ್" (Miniature powderpuff) ಎಂದು ಕಿಂಕರ ಹೂವನ್ನು ಗುರುತಿಸುತ್ತಾರೆ.ಕುಂಬ್ರಿ ಮರಾಠಿ ಸಮುದಾಯದ ಜನರು ಈ ಹೂವನ್ನು "ಮಿಷಾಳೆ" ಎಂದು ಕರೆಯುತ್ತಾರೆ. "ಮಿಮೋಸೇಶಿಯೇ" (Mimosaceae) ಸಸ್ಯಕುಟುಂಬಕ್ಕೆ ಸೇರಿದ ಇದರ ವೈಜ್ಞಾನಿಕ ಹೆಸರೆಂದರೆ "ಕಾಲ್ಲಿಯೇಂಡ್ರಾ ಎಮೊರ್ಜಿನಾಟಾ" (Calliandra Emarginata).
ಮಳೆಗಾಲ ಪ್ರಾರಂಭವಾದೊಡನೆ ಚಿಗುರೊಡೆದು, ಕೆಲ ದಿನಗಳ ಬಳಿಕ ಗಿಡದ ತುಂಬಾ ಹೂಬಿಟ್ಟು ಕಂಗೊಳಿಸುವ ಕಿಂಕರ ಹೂವು ನೋಡಲು ಅತ್ಯಂತ ವೈಭವಪೂರ್ಣವೆನ್ನಿಸಿಕೊಂಡಿದೆ.ಇದು ಗೊಂಚಲಿನಲ್ಲಿ ಅರಳುವ ಹೂವಲ್ಲ. ಬಿಡಿ ಹೂವು. ಆದರೆ, ಹೊಸದಾಗಿ ಚಿಗುರಿದ ಟಿಸಿಲಿಗೆ ದಿನವೂ ಒಂದೊಂದೇ ಹೂವಿನಂತೆ ತುದಿಯವರೆಗೂ ಅರಳಬಲ್ಲದು. ಸಪೂರವಾದ ಕಡ್ಡಿಯಂತಹ ರಚನೆಯುಳ್ಳ ಈ ಹೂವಿನ ಸಾವಿರಾರು ಎಸಳುಗಳು ಎರಡು ಸೆಂ.ಮೀ ಉದ್ದವಿರುತ್ತವೆ.ಮತ್ತು ಎಸಳಿನ ಕವಚಪಾತ್ರೆಯು ಬಿಳಿ ಬಣ್ಣದಲ್ಲಿರುತ್ತದೆ. ಹಾಗೂ ಪ್ರತೀ ಎಸಳಿನ ತುದಿಯಲ್ಲಿ ಚಿಕ್ಕದಾದ ಕಾಳಿನ ರಚನೆಯನ್ನೊಳಗೊಂಡಿದೆ. ತೀಕ್ಷ್ಣ ಕೆಂಪು ಮತ್ತು ಬಿಳಿ ಈ ಎರಡು ಬಣ್ಣಗಳಲ್ಲಿ ಕಾಣಸಿಗುವ ಈ ಹೂವಿನ ಆಯಸ್ಸು ಒಂದು ದಿನವಷ್ಟೇ! ಅಷ್ಟರಲ್ಲಿಯೇ ಪಾತರಗಿತ್ತಿಯನ್ನು ಆಕರ್ಷಿಸುವ ಸೊಬಗಿನ ಪುಷ್ಪವಿದು.
ಕಿಂಕರ ಹೂವು ಹಳಸಿದ ಬಳಿಕ ಅದಕ್ಕೆ ಬಿಡುವ ಉದ್ದನೆಯ ಬೀಜಕೋಶಗಳು ಹಸಿರು ಬಣ್ಣದಲ್ಲಿರುತ್ತವೆ.ಬಲಿತಾಗ ಕಂದು ಬಣ್ಣಕ್ಕೆ ತಿರುಗುತ್ತದೆ. ಈ ಕವಚದೊಳಗೆ ನಾಲ್ಕೈದು ನಯವಾದ ಬೀಜಗಳಿರುತ್ತವೆ. ವಿಶೇಷವೆಂದರೆ, ಒಂದು ಹೂವಿನಲ್ಲಿ ಗರಿಷ್ಟ ಆರು ಬೀಜಕೋಶಗಳನ್ನು ಕಾಣಲು ಸಾಧ್ಯ!
ಹಸಿರು ಕಡ್ಡಿಗೆ ಮಣಿಗಳ ಗೊಂಚಲಿನಂತೆ ಕಾಣುವ ಕಿಂಕರ ಹೂವಿನ ಮೊಗ್ಗು ನಾಲ್ಕೈದು ದಿನಕ್ಕೆ ಅರಳಿ ಕಂಗೊಳಿಸುತ್ತದೆ.ಒಮ್ಮೆ ಹೂಬಿಡಲು ಪ್ರಾರಂಭವಾದರೆ ಸತತವಾಗಿ ಆರರಿಂದ ಎಂಟು ವಾರಗಳ ಕಾಲ ಹೂವು ಅರಳುವ ಮೂಲಕ, ಗಿಡದ ತುಂಬೆಲ್ಲಾ ತನ್ನ ಸೊಬಗನ್ನು ಮೆರೆಯುತ್ತದೆ. ಬಳಿಕ ಒಂದು ವಾರದಲ್ಲಿ ಮತ್ತೆ ಯಥಾಪ್ರಕಾರ! ಆದರೆ ಬೇಸಿಗೆಯಲ್ಲಿ ಕಿಂಕರ ಗಿಡಕ್ಕೆ ಹೂವು ಬಿಡುವುದಿಲ್ಲ. ವರ್ಷಪೂರ್ತಿಯೂ ಹಚ್ಚಹಸಿರಿನಿಂದಿರುವ ಕಿಂಕರ ಗಿಡದ ಎತ್ತರ ಆರರಿಂದ-ಏಳು ಅಡಿ. ಇದು ಮಧ್ಯಮ ಗಾತ್ರದ ಪೊದೆ ಸಸ್ಯವಾಗಿ ಬೆಳವಣಿಗೆ ಹೊಂದುತ್ತದೆ. ಈ ಸಸ್ಯದ ಟೊಂಗೆಯು ಕಂದು ಬಣ್ಣದಲ್ಲಿದ್ದು, ಮೇಲ್ನೋಟಕ್ಕೆ ಭಿರುಸಾಗಿ ಕಾಣುತ್ತದೆ.ಆದರೆ, ಟೊಂಗೆಯನ್ನು ಮುರಿದರೆ ಅದು ನಾರಿನ ಗುಣಧರ್ಮವನ್ನೊಳಗೊಂಡಿರುವುದನ್ನು ಗಮನಿಸಲು ಸಾಧ್ಯ.
ಕಿಂಕರ ಎಲೆಯ ರಚನೆಯೂ ವಿಶೇಷವಾಗಿದೆ. ಒಂದೇ ಬುಡಕ್ಕೆ ಎರಡು ಕವಲೊಡೆದು ದ್ವಿಪರ್ಣಿ ರೂಪದಲ್ಲಿ ಕಿಂಕರ ಎಲೆಗಳು ಕಣ್ಮನ ಸೆಳೆಯುತ್ತವೆ.ನಯವಾದ ಗಾಡ ಹಸಿರು ಬಣ್ಣದ ಎಲೆಗಳ ಉದ್ದ ಆರು ಸೆಂ.ಮೀ ಗಳು. ಇದಕ್ಕೆ ಎಂಟರಿಂದ-ಒಂಭತ್ತು ಜೋಡಿ ಎಲೆಯ ರಚನೆಯಿರುತ್ತದೆ. ಒಟ್ಟಿನಲ್ಲಿ ,ಈ ಬಹುವಾರ್ಷಿಕ ಸಸ್ಯ ದ ತೀಕ್ಷ್ಣ ಕೆಂಪು ವರ್ಣದ ಪುಷ್ಪ ವರ್ಷದಲ್ಲಿ ಹೆಚ್ಚು ಸಮಯ ಹೂಬಿಡುವ ಸಸ್ಯ ಪ್ರಬೇಧವಾಗಿದೆ!
..............................................................
ಚಿತ್ರಬರಹ -- ಭವ್ಯಾ ನೇರಲಜಡ್ಡಿ .
ಜೂನ್ 14, 2016
" ನಂಜಾಟಲೆ ಹೂವು ".
ಹಲವಾರು ಕೊಂಬೆಗಳನ್ನು ಹೊಂದಿ, ಚಿಕ್ಕ ಮರವಾಗಿ ಬೆಳೆಯುವ ನಂಜಾಟಲೆ ಸಸ್ಯವು ಸಾಮಾನ್ಯವಾಗಿ ಹತ್ತು ಅಡಿ ಎತ್ತರದವರೆಗೂ ಬೆಳೆಯುತ್ತದೆ. ಕನ್ನಡದಲ್ಲಿ ನಂದಿಬಟ್ಟಲು ಎಂದೂ ಹೆಸರಿದೆ. ನಂಜಾಟಲೆ ಹೂವು ಶಿವ ಪೂಜೆಗೆ ವಿಶೇಷವೆನಿಸಿದ ಪುಷ್ಪ.
ಹಿಂದಿ ಭಾಷೆಯಲ್ಲಿ- ಚಾಂದನೀ, ತಗರಿ. ತಮಿಳು- ನಂದಿಯಾರ್ ವಟ್ಟೈ. ಗುಜರಾತಿ- ಸಗರ್. ಮರಾಠಿ- ಅನಂತ, ತಗರ್. ಇಂಗ್ಲೀಷ್ ನಲ್ಲಿ- ಕ್ರೇಪ್ ಜಾಸ್ಮಿನ್ ( Crape Jasmine), ಪಿನ್ವೀಲ್ (Pinwheel), ಮೂನ್ಬೀಮ್ (Moonbeam) ಎಂದು ಹೇಳಲಾಗುವ ನಂಜಾಟಲೆ ಯ ಸಸ್ಯಶಾಸ್ತ್ರೀಯ ಹೆಸರು " ಥೇಬರ್ನಮಂಟಾನಾ ದಿವಾರಿಕಾಟಾ "( Tabernaemontana Divaricata ). ಇದನ್ನು, ಥೇಬರ್ನಮಂಟಾನಾ ಸಿಟ್ರಿಪೋಲಿಯ ( Tabernaemontana Citrifolia ) ಹಾಗೂ ಥೇಬರ್ನಮಂಟಾನಾ ಕೊರೊನೇರಿಯ (Tabernaemontana Coronaria) ಎಂಬ ಹೆಸರುಗಳಿನಂದಲೂ ಗುರುತಿಸಲಾಗುತ್ತದೆ.
ಭಾರತದೆಲ್ಲೆಡೆ ಸಹಜವಾಗಿ ಬೆಳೆಯುವ ಈ ಸಸ್ಯವನ್ನು ಅಲಂಕಾರಿಕ ಮರವನ್ನಾಗಿಯೂ ನೆಟ್ಟು ಬೆಳೆಸುತ್ತಾರೆ. ಆದ್ದರಿಂದ, ಗೇಣುದ್ದದ ಗಿಡದಿಂದ - ಹತ್ತು ಅಡಿ ಎತ್ತರದವರೆಗಿನ ನಂಜಾಟಲೆ ಮರ ಕಾಣಸಿಗುತ್ತದೆ. ಇದರ ಕಾಂಡವು ಬಿಳಿ ಬಣ್ಣದಲ್ಲಿದೆ.ಎಲೆಗಳು ಗಾಢ ಹಸಿರು ಬಣ್ಣದಲ್ಲಿದ್ದು ದೀರ್ಘ ವೃತ್ತಾಕಾರದಲ್ಲಿರುತ್ತವೆ ಹಾಗೂ ಎಲೆಯ ತುದಿ ಚೂಪಾಗಿರುತ್ತದೆ. ಚಿಕ್ಕ ಗಿಡವಾಗಿ ಬೆಳೆಯುವ ನಂಜಾಟಲೆಯ ಒಂದು ಪ್ರಬೇಧದ ಎಲೆಯು ಬಿಳಿ ಹಾಗೂ ಹಸಿರು ಮಿಶ್ರಿತ ಪಟ್ಟೆಯಂತೆ ಬಣ್ಣವನ್ನು ಒಳಗೊಂಡಿರುವುದು ವಿಶೇಷ. ಇದರ ಹೂವು ಶುಭ್ರ ಬಿಳಿ ವರ್ಣದಲ್ಲಿರುತ್ತದೆ. ನಂಜಾಟಲೆಯ ಎಲೆ ಮತ್ತು ಕಾಂಡ ಕತ್ತರಿಸಿದರೆ ಬಿಳಿಯ ದ್ರವ ಜಿನುಗುತ್ತದೆ. ಸಸ್ಯದ ಭಾಗಗಳು ಕಹಿಯಾಗಿರುತ್ತವೆ.
ಸಾಮಾನ್ಯವಾಗಿ ನಂಜಾಟಲೆ ಯಲ್ಲಿ , ಬಿಳಿ-ತಿಳಿ ಹಳದಿ ಮಿಶ್ರಿತ ಬಣ್ಣ ಮತ್ತು ಬಿಳಿ ಬಣ್ಣದ ಹೂವುಗಳಿವೆ. ಇದರಲ್ಲಿ, ಐದು ಎಸಳಿನ ಹೂಗಳು ಹಾಗೂ ಇದಕ್ಕೂ ದೊಡ್ಡ ಆಕಾರದ, ಹೆಚ್ಚು ದಳಗಳನ್ನು ಹೊಂದಿದ ಹೂವುಗಳನ್ನೂ ನೋಡಲು ಸಾಧ್ಯ. ಇವುಗಳಲ್ಲಿ ಬಿಡಿ ಹೂಗಳು ಮತ್ತು ಗೊಂಚಲಿನಲ್ಲಿ ಅರಳುವ ಹೂಗಳೂ ಸಹ ಇವೆ.ತುಸು ಉದ್ದ ಎಸಳಿನ ಹಳದಿ ಮಿಶ್ರಿತ ಐದು ಎಸಳಿನ ಹೂವು ಅತ್ಯಂತ ಸುವಾಸನೆ ಭರಿತ ಪುಷ್ಪ. ಸಾಮಾನ್ಯವಾಗಿ, ಎಲ್ಲಾ ತರಹದ ನಂಜಾಟಲೆ ಯ ಮೊಗ್ಗು ಭರ್ಚಿಯಾಕಾರದಲ್ಲಿದ್ದು, ಹೂವು ಪರಿಮಳಯುಕ್ತವಾಗಿರುತ್ತವೆ.
ಆದರೆ, ಗೊಂಚಲಿನಲ್ಲಿ ಅರಳುವ ಐದು ಎಸಳಿನ ಚಿಕ್ಕ ಬಿಳಿ ಹೂಗಳು ಸೊಗಸಾದ ಸುವಾಸಿತ ಪುಷ್ಪಗಳಲ್ಲ.ಬದಲಾಗಿ, ಮಂದ ಕಟು ಘಮಲನ್ನೊಳಗೊಂಡಿದೆ.ಹಾಗೂ ಇದರ ಮೊಗ್ಗು ಚೂಪಾಗಿರದೇ ಗುಂಡಾಗಿದೆ.ಇದರ ತಿಳಿ ಹಸಿರು ಮೊಗ್ಗು ಅರಳಲು ಮೂರ್ನಾಲ್ಕು ದಿನಗಳು ಬೇಕು.ಅಂತೆಯೇ, ಹೂವು ಉದುರುವುದು ಕೂಡಾ ಎರಡು ದಿನಗಳ ನಂತರವೇ. ನಿತ್ಯಹರಿದ್ವರ್ಣ ನಂಜಾಟಲೆಯ ಈ ಪ್ರಬೇಧವು ನೀರನ್ನು ಆಶ್ರಯಿಸದೆಯೇ ವರ್ಷಪೂರ್ತಿಯೂ ಹೂಬಿಟ್ಟು ಕಂಗೊಳಿಸುತ್ತದೆ! ಇತರ ಪರಿಮಳಯುಕ್ತ ನಂಜಾಟಲೆ ಪ್ರಬೇಧಗಳು ವರ್ಷವಿಡೀ ಹಚ್ಚ ಹಸಿರಿನಿಂದ ಕೂಡಿದ್ದರೂ ಹೂ ಬಿಡುವುದು ಗಿಡಕ್ಕೆ ತೇವಾಂಶ ಸಿಕ್ಕಾಗ ಮಾತ್ರ!
..............................................................
ಚಿತ್ರಬರಹ -- ಭವ್ಯಾ ನೇರಲಜಡ್ಡಿ .
ಏಪ್ರಿಲ್ 30, 2016
" ಚಿತ್ರಮೂಲ ಹೂವು ".
ಬೆಚ್ಚಗಿನ ವಾತಾವರಣವನ್ನು ಅಪೇಕ್ಷಿಸಿ, ಕಾನನದಲ್ಲಿ ಬೆಳೆಯುವ ನಿತ್ಯಹರಿದ್ವರ್ಣ ಪೊದೆಸಸ್ಯ ಚಿತ್ರಮೂಲ.ಇದನ್ನು ಕನ್ನಡ ಭಾಷೆಯಲ್ಲಿ ಚಿತ್ರಮೂಲಿಕಾ, ಚಿತ್ರಮಲ್ಲಿಗೆ ಎಂದೂ ಕರೆಯುತ್ತಾರೆ. ಹಿಂದಿಯಲ್ಲಿ- ಚಿತ್ರಕ್, ಇಂಗ್ಲೀಷ್ ಭಾಷೆಯಲ್ಲಿ- ಲೀಡ್ವಾರ್ಟ್ (Leadwort) ಎಂದರೆ, ತಮಿಳಿನಲ್ಲಿ- ಚಿತ್ರಮೂಲಮ್, ಓರಿಯಾ ಭಾಷೆಯಲ್ಲಿ -ಓಗ್ನಿ ಎಂದು ಗುರುತಿಸಲಾಗುತ್ತದೆ. ಫ್ಲಂಬೆಗಿನೇಶಿಯಾ (Plumbaginaceae) ಸಸ್ಯಕುಟುಂಬಕ್ಕೆ ಸೇರಿದ ಇದರ ಸಸ್ಯಶಾಸ್ತ್ರೀಯ ಹೆಸರು ಪ್ಲಂಬೇಗೊ ಇಂಡಿಕಾ (Plumbago Indica). ಇದರ ಮೂಲಸ್ಥಾನ ಆಗ್ನೇಯ ಏಷ್ಯಾ. ಮಲೆನಾಡಿನ ದಟ್ಟಾರಣ್ಯದಲ್ಲಿ ಈ ಸಸ್ಯಪ್ರಬೇಧವು ಹೆಚ್ಚಾಗಿ ಕಾಣಸಿಗುತ್ತದೆ.
ಸಾಮಾನ್ಯವಾಗಿ, ಈ ಸಸ್ಯವು ಇಪ್ಪತ್ತು ವಿವಿಧ ಪ್ರಬೇಧಗಳನ್ನೊಳಗೊಂಡಿದೆ.ಆದರೆ, ಫ್ಲಂಬೇಗೊ ಅಫಿಲ್ಲಾ (Plumbago Aphylla), ಪ್ಲಂಬೇಗೊ ಅರಿಕ್ಯುಲಾಟಾ (Plumbago Auriculata), ಪ್ಲಂಬೇಗೊ ಸೀರುಲಿ (Plumbago caerulea), ಪ್ಲಂಬೇಗೊ ಯುರೋಪಿಯಾ (Plumbago Eropaea), ಪ್ಲಂಬೇಗೊ ಇಂಡಿಕಾ (Plumbago Indica), ಪ್ಲಂಬೇಗೊ ಪುಲ್ಚೇಲ್ಲಾ (Plumbago Pulchella), ಪ್ಲಂಬೇಗೊ ಸ್ಕಾಂಡೆನ್ಸ್ (Plumbago Scandens), ಪ್ಲಂಬೇಗೊ ವಿಸ್ಸಿ (Plumbago Wissi), ಪ್ಲಂಬೇಗೊ ಜೀಲೇನಿಕಾ (Plumbago Zeylanica). ಇವು ಚಿತ್ರಮೂಲ ಸಸ್ಯದ ಪ್ರಮುಖ ಪ್ರಬೇಧಗಳಾಗಿವೆ.
ಈ ಹೂವಿನ ಬೇರೆ ಬೇರೆ ಪ್ರಬೇಧಗಳಲ್ಲಿ, ವಿವಿಧ ವರ್ಣಗಳನ್ನೊಳಗೊಂಡ ಹೂವುಗಳಿವೆ. ರಕ್ತ ಕೆಂಪು, ಬಿಳಿ, ನೀಲಿ, ನೇರಳೆ ಬಣ್ಣಗಳಲ್ಲಿ ಬಿಳಿ ಹಾಗೂ ರಕ್ತ ಕೆಂಪು ವರ್ಣದ ಹೂವುಗಳು ಹೋಲಿಕೆಯಲ್ಲಿ ಒಂದೇ ತೆರನಾಗಿವೆ.ಇತರ ಬಣ್ಣದ ಹೂಗಳು ಹೂದೋಟಕ್ಕೆ ಸೀಮಿತವಾದ ಸಸ್ಯಗಳು. ಬಿಳಿ ಬಣ್ಣದ ಹೂವಿನ ಚಿತ್ರಮೂಲ ವನ್ನು ಔಷಧಗಳಲ್ಲಿ ಬಳಸಲಾಗುವ ಕಾರಣ, ಇದನ್ನೂ ಸಹ ಉದ್ಯಾನವನಗಳಲ್ಲಿ ಬೆಳೆಸಲಾಗುತ್ತದೆ.ಇವು ವರ್ಷಪೂರ್ತಿ ಹೂಬಿಡುವ ಸಸ್ಯ ಪ್ರಬೇಧಗಳು.ಆದಾಗ್ಯೂ, ಕಾಡಿನಲ್ಲಿ ಬೆಳೆಯುವ ಈ ಸಸ್ಯ, ಹಾಗೂ ಇದರ ಹೂವು ಈ ಎಲ್ಲಾ ಪ್ರಬೇಧಗಳಿಗಿಂತ ಆಕರ್ಷಕವಾದದ್ದು.
ಚಳಿಗಾಲದಲ್ಲಿ ಹೂಬಿಡುವ ರಕ್ತ ಕೆಂಪು ವರ್ಣದ ಚಿತ್ರಮೂಲ ಹೂವು ತನ್ನ ಆಕಾರ, ಹೊಳೆಯುವ ಬಣ್ಣದಿಂದಲೇ ಗಮನ ಸೆಳೆಯುತ್ತದೆ. ಐದು ಎಸಳನ್ನು ಮುಕುಟದಲ್ಲಿ ಹೊಂದಿದ ಕೊಳವೆಯಾಕಾರದ ಇದು ಗೊಂಚಲಿನಲ್ಲಿ ಅರಳುತ್ತದೆ. ಇದರ ಎಸಳು ತೆಳುವಾಗಿದ್ದು, ಹಾಲೆಯಂತೆ ತೋರುತ್ತದೆ. ಹಸಿರು ಹಾಗೂ ಕೆಂಪು ಮಿಶ್ರಿತ ರೋಮರಚನೆಯುಳ್ಳ ಪುಷ್ಪ ಪಾತ್ರೆಗಳು ಅಂಟಿನಿಂದ ಕೂಡಿದೆ.ಇದು ಕೀಟಗಳಿಂದ ರಕ್ಷಣೆ ಪಡೆಯಲು ಸಹಾಯಕವೂ ಹೌದು.
ಈ ಸಸ್ಯವು ಎರಡು ಮೀಟರ್ ಎತ್ತರದವರೆಗೆ ಬೆಳವಣಿಗೆ ಹೊಂದುತ್ತದೆ.ಮತ್ತು ಇದರ ಬೇರು ಸುತ್ತಲಿನ ಪ್ರದೇಶವನ್ನಾಕ್ರಮಿಸಿ ಬಹುದೂರದವರೆಗೆ ಅಲ್ಲಲ್ಲಿ ಚಿಗುರೊಡೆದು ಕೂಡಾ ಬೆಳೆಯುತ್ತದೆ.ಅಂಡಾಕೃತಿಯ ಗಾಢ ಹಸಿರುಬಣ್ಣದ ನಯವಾದ ಎಲೆಗಳು ಹಾಗೂ ಸಪೂರವಾದ ಕಾಂಡವನ್ನೊಳಗೊಂಡ ಬಹು ಅಪರೂಪದ ಸಸ್ಯವಿದು.
..............................................................
ಬರಹ-- ಭವ್ಯಾ ನೇರಲಜಡ್ಡಿ.
ಚಿತ್ರಗಳು-- ಭಾಗ್ಯಶ್ರೀ. ವಿ. ಹೆಗಡೆ.
ವೇಣುಗೋಪಾಲ ಗೌಡ. ಎಂ.ಕೆ.
ಏಪ್ರಿಲ್ 03, 2016
" ಶಂಖಪುಷ್ಪ ".
ತಂಪಾದ ವಾತಾವರಣ ಹಾಗೂ ತೇವಾಂಶವುಳ್ಳ ನೆಲದಲ್ಲಿ ಬಳ್ಳಿಯಾಗಿ ಹಬ್ಬಿ, ವರ್ಷಪೂರ್ತಿ ಹೂಬಿಡುವ "ಶಂಖಪುಷ್ಪ" ಬಹುವಾರ್ಷಿಕ ಸಸ್ಯ.ಸಾಮಾನ್ಯವಾಗಿ, ಹತ್ತು ಅಡಿ ಉದ್ದದವರೆಗೆ ಬೆಳೆಯುವ ಈ ಬಳ್ಳಿಗೆ ಕವಲುಗಳು ಹಲವಾರು.ಆದ್ದರಿಂದ ಇದನ್ನು ಅಲಂಕಾರಿಕ ಹೂವಿನ ಸಸ್ಯವೆಂದು ಚಪ್ಪರಕ್ಕೇರಿಸಿ ಬೆಳೆಸಿ ಆರೈಕೆ ಮಾಡಲಾಗುತ್ತದೆ.
ಈ ಪ್ರಬೇಧ ದ ಸಸ್ಯಗಳಲ್ಲಿ, ಒಂಟಿ ಎಸಳಿನ ಹಾಗೂ ಬಹು ಎಸಳುಗಳನ್ನು ಹೊಂದಿದ ಎರಡು ತರಹದ ಹೂವುಗಳನ್ನು ಕಾಣಬಹುದು. ಹೂವಿನ ಆಕಾರದಲ್ಲಿ ವ್ಯತ್ಯಾಸವೇ ಹೊರತು ಉಳಿದಂತೆ ಈ ಸಸ್ಯದ ಗುಣಧರ್ಮ ಒಂದೇ ಆಗಿದೆ. ಗಾಢ ನೀಲಿ, ಬಿಳಿ, ತಿಳಿ ಗುಲಾಬಿ, ತಿಳಿ ನೀಲಿ ಬಣ್ಣಗಳಲ್ಲಿ ಶಂಖಪುಷ್ಪ ಹೂ ಬಿಡುತ್ತದೆ. ತಿಳಿಹಸಿರು ರಕ್ಷಾಪತ್ರವನ್ನು ಹೊಂದಿದ ಮೊಗ್ಗು ಅರಳಲು ನಾಲ್ಕು ದಿನಗಳ ಕಾಲ ಬೇಕು.ಆದರೆ, ಅರಳಿದ ಹೂವು ಒಂದೇ ದಿನದಲ್ಲಿ ಹಳಸಿಬಿಡುತ್ತದೆ. ಒಂಟಿ ಎಸಳಿನ ಹೂವು ಗೋವಿನ ಕಿವಿಯನ್ನು ಹೋಲುವಂತಿದ್ದರೆ, ಹೆಚ್ಚು ಎಸಳನ್ನು ಹೊಂದಿದ ಹೂವು ಶಂಖವನ್ನು ಹೋಲುತ್ತದೆ.ಆದ್ದರಿಂದಲೇ ಈ ಹೂವು ಮರಾಠಿ ಭಾಷೆಯಲ್ಲಿ ಗೋಖರ್ಣ, ಶಂಖಪುಷ್ಪ ಎಂದು ಗುರುತಿಸಿಕೊಂಡಿದೆ.ವಿಶೇಷವೆಂದರೆ, ಎಲ್ಲಾ ತರಹದ ಹೂವುಗೂ ಮಧ್ಯಭಾಗದಲ್ಲಿ ಬಿಳಿ ಬಣ್ಣವನ್ನು ಹೊಂದಿರುತ್ತವೆ.ಹೂವಿನ ಅಡಿಭಾಗ ನಯವಾಗಿದ್ದು, ಮೇಲ್ಭಾಗ ಹೊಳೆಯುವ ಮೆದುವಾದ ರೋಮರಚನೆಯನ್ನೊಳಗೊಂಡಿದೆ.ಒಂಟಿ ದಳದ ಹೂವುಗಳ ಬುಡದಲ್ಲೊಂದು ಪುಟ್ಟ ದಳವಿದೆ.ಆದರೆ,ಈ ರೀತಿಯ ಹೂವುಗಳಿಗೆ ಹೂವಿನ ಶಲಾಕಗಳು ಕಂಡುಬರುವುದಿಲ್ಲ. ಮೂರು ಇಂಚು ಉದ್ದದ ಶಂಖಪುಷ್ಪ ತುಸು ಕಟುವಾದ ಸುವಾಸನೆಯನ್ನೊಳಗೊಂಡಿದೆ.
ಶಂಖಪುಷ್ಪದ ಮೂಲ ಥಾಯ್ಲಾಂಡ್. ಇಲ್ಲಿನ ಅತಿಥಿ ಸತ್ಕಾರದ ಪ್ರಮುಖ ತಂಪು ಪಾನೀಯ "ನಾಮ್ ಡಕ್ ಅಂಚನ್" (Nam Dok Anchan) ಗೆ ಶಂಖಪುಷ್ಪದ ಕಡು ನೀಲಿ ಬಣ್ಣದ ಹೂವನ್ನು ಬಳಸಲಾಗುತ್ತದೆ. ಗುಲಾಬಿ ಮಿಶ್ರಿತ ನೇರಳೆ ಬಣ್ಣದ ಈ ಪಾನೀಯದ ಸ್ವಾದಕ್ಕಾಗಿ ಜೇನುತುಪ್ಪ ಹಾಗೂ ಲಿಂಬುರಸವನ್ನು ಮಿಶ್ರಮಾಡಿ ಸೇವಿಸುತ್ತಾರೆ.ಮತ್ತು, ಇಲ್ಲಿನ "ನಾಸಿ ಕೇರಬು" (Nasi kerabu) ಎಂಬ ಅನ್ನದ ಖಾದ್ಯದ ಬಣ್ಣಕ್ಕಾಗಿ ಈ ಹೂವಿನ ಸಾರವನ್ನು ಬಳಸುವುದು ವಿಶೇಷ. ಅಂತೆಯೇ, ಮಲೇಷಿಯಾದಲ್ಲಿ "ಪುಲುಟ್ ಕೇತನ್" (Pulut ketan) ಅಥವಾ "ಕುಹ್ ಕೇತನ್" (Kuh ketan) ಎನ್ನುವ ಅನ್ನದ ಖಾದ್ಯದ ಬಣ್ಣಕ್ಕಾಗಿ ಈ ಹೂವಿನ ಬಳಕೆ ಪ್ರಚಲಿತವಾಗಿದೆ.ಆಗ್ನೇಯ ಏಷ್ಯಾದಲ್ಲಿಯೂ ಆಹಾರದಲ್ಲಿ, ಹಾಗೂ ವಿಶೇಷವಾಗಿ ಬಿಳಿ ಹೂವನ್ನು ಔಷಧ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಕಾರಣ, ಶಂಖಪುಷ್ಪವು ಒಂದು ವನಸ್ಪತಿ ಸಸ್ಯ. ಇದರ ಹೂವು ತಂಪುದಾಯಕ ಹಾಗೂ ಹೆಚ್ಚಿನ ಉತ್ಕರ್ಷಣ ಗುಣದ ಆಗರ. ಆದ್ದರಿಂದ ಇದನ್ನು ನೆನಪಿನ ಶಕ್ತಿ ವೃದ್ಧಿಗೆ, ಖಿನ್ನತೆಯ ನಿವಾರಣಾ ಔಷಧಿ, ಕೂದಲ ಬೆಳವಣಿಗೆಯ ಔಷಧಗಳಲ್ಲಿ ಬಳಸಲಾಗುತ್ತದೆ.
ಫೇಬಸಿಯೇ (Fabaceae) ಕುಟುಂಬವರ್ಗಕ್ಕೆ ಸೇರಿದ ಶಂಖಪುಷ್ಪದ ಸಸ್ಯಶಾಸ್ತ್ರೀಯ ಹೆಸರು ಕ್ಲಿಟೋರಿಯಾ ಟರ್ನೇಟೀ (Clitoria ternatea). ಆಂಗ್ಲ ಭಾಷೆಯಲ್ಲಿ- ಬಟರ್ ಫ್ಲೈ ಪೀ (Butterfly pea), ಬ್ಲೂ ಬೆಲ್ (Blue bell), ಬ್ಲೂ ಪೀ (Blue pea), ಕಾರ್ಡೊಫ್ಯಾನ್ (Cardo fan), ಏಷಿಯನ್ ಪೀಗನ್ ವಿಂಗ್ಸ್ (Asian pegion wings). ಹಿಂದಿ,ಬೆಂಗಾಳಿ, ಮಣಿಪುರಿ ಭಾಷೆಗಳಲ್ಲಿ- ಅಪರಾಜಿತಾ.ಕೊಂಕಣಿ ಹಾಗೂ ಕನ್ನಡದಲ್ಲಿ-ಶಂಖಪುಷ್ಪ.ಥಾಯ್ ಭಾಷೆಯಲ್ಲಿ- ಅಂಚನ್. ಮಲಯ್ ಭಾಷೆಯಲ್ಲಿ-ಬುಂಗಾ ತೇಲಂಗ್. ಸಂಸ್ಕೃತ-ಮುದ್ಗಪರ್ಣಿ.ಮಲಯಾಳಂ-ಸಂಗು ಪುಷ್ಪಮ್, ಕಟ್ಟುಪಯರ್.ತಮಿಳು-ಕನ್ನಿಕ್ಕೋಡಿ.ತೆಲುಗು-ಶಂಖಫೂಲು. ಹೀಗೆ ಹಲವಾರು ಹೆಸರುಗಳಲ್ಲಿ ಶಂಖಪುಷ್ಪವನ್ನು ಗುರುತಿಸಲಾಗುತ್ತದೆ.
ಈ ಸಸ್ಯದ ಪ್ರತೀ ಎಲೆಯ ಬುಡದಲ್ಲಿಯೂ ಹೂವು ಅರಳುತ್ತದೆ. ಎಲೆಯು ಎರಡು ಇಂಚು ಉದ್ದವಿದ್ದು ಅಂಡಾಕಾರದಲ್ಲಿದೆ.ಆದರೆ, ಐದು ಬಿಡಿ ಎಲೆಗಳ ಗೊಂಚಲಿನ ಪರ್ಣಕವಿದು.ಇದರ ಎಲೆಗಳು ನೆಲಕ್ಕೆ ಉದುರಿ ಕೊಳೆತಾಗ ಇವು ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುತ್ತವೆ.ಹಾಗೂ ಏಳೆಂಟು ದ್ವಿದಳ ಬೀಜಗಳನ್ನೊಳಗೊಂಡ ಶಂಖಪುಷ್ಪದ ಕಾಯಿ ಏಳು ಇಂಚು ಉದ್ದವಾಗಿದ್ದು, ಒಣಗಿ ತಾನಾಗಿಯೇ ಒಡೆದು ನೆಲಕ್ಕೆ ಬಿದ್ದು ಸಹಜವಾಗಿ ನೆಲದ ತೇವಾಂಶದಲ್ಲಿ ಸಸ್ಯಾಭಿವೃದ್ಧಿಗೊಳ್ಳುತ್ತವೆ.
..............................................................
ಬರಹ-- ಭವ್ಯಾ ನೇರಲಜಡ್ಡಿ.
ಚಿತ್ರಗಳು-- ಪ್ರಭಾತ ಎಂ. ಹೆಗಡೆ,
ವೇಣುಗೋಪಾಲ ಗೌಡ ಎಂ.ಕೆ.
ಮಾರ್ಚ್ 26, 2016
" ಕರವೀರ ಹೂವು "
ಅಲಂಕಾರಿಕ ಹೂವಿನ ಸಸ್ಯವಾಗಿ ರಸ್ತೆ ಬದಿಗಳಲ್ಲಿ, ಉದ್ಯಾನಗಳಲ್ಲಿ ಕರವೀರ ಗಿಡವನ್ನು ಬೆಳೆಸುತ್ತಾರೆ. ಇದು ನಿತ್ಯ ಹರಿದ್ವರ್ಣದ ಪೊದರುಗಿಡ. ತಂಪಾದ ನೆಲದಲ್ಲಿ ಹತ್ತರಿಂದ ಇಪ್ಪತ್ತು ಅಡಿ ಎತ್ತರಕ್ಕೆ ಬೆಳೆಯುವ ಚಿಕ್ಕ ಮರವೂ ಹೌದು. ಇದರ ಮೂಲಸ್ಥಾನ ದಕ್ಷಿಣ ಮೆಕ್ಸಿಕೊ ಮತ್ತು ಮಧ್ಯ ಅಮೇರಿಕಾ. ಅಪೋಸೈನೇಸಿ (Apocynaceae) ಸಸ್ಯ ಕುಟುಂಬಕ್ಕೆ ಸೇರಿದ ಕರವೀರದ ವೈಜ್ಞಾನಿಕ ಹೆಸರೆಂದರೆ, ತೀವಿಷಾ ಪೆರುವಿಯಾನಾ (Thevetia Peruviana). ಇದನ್ನು ತೀವಿಷಾ ನೆರಿಫೋಲಿಯಾ (Thevetia Neriifolia) ಹಾಗೂ ಕ್ಯಾಸ್ಕಬೇಲಾ ತೀವಿಷಾ (Cascabela Thevetia) ಎಂಬ ಹೆಸರಿನಿಂದಲೂ ಗುರುತಿಸಲಾಗುತ್ತದೆ.
ಕನ್ನಡದಲ್ಲಿ- ಕರವೀರ, ಕಾಡು ಕಣಗಿಲೆ. ಆಂಗ್ಲ ಭಾಷೆಯಲ್ಲಿ- ಮೆಕ್ಸಿಕನ್ ಓಲಿಯೆಂಡರ್ (Mexican Oleander), ಯೆಲ್ಲೋ ಓಲಿಯೆಂಡರ್ (Yellow Oleander), ಲಕ್ಕಿ ನಟ್ (Lucky Nut), ಇಂಡಿಯನ್ ಓಲಿಯೆಂಡರ್ (Indian Oleander), ಗೀಲೊಲೆಂಡರ್ (Geelolender). ಹಿಂದಿ- ಕನೇರ್, ಪೀಲಿ ಕನೇರ್, ಕರ್ಬೇರ್. ಸಂಸ್ಕೃತ- ಕರವೀರ, ಪೀತ ಕರವೀರ, ಅಶ್ವಘ್ನ, ಅಶ್ವಮರಕ, ಹಯಮರಕ. ಮಲಯಾಳಂ- ಮಂಜಅರಳಿ, ಕನವೀರಮ್, ಕರವೀರಮ್. ಮಣಿಪುರಿ- ಉಂಟೊಂಗ್ಲೈ, ಬೆಂಗಾಳಿ- ಕೊಲ್ಕಾಫೂಲ್, ತಮಿಳು-ಮಂಜಲ್ ಅರಳಿ. ಸಿಂಹಳ- ಕನೇರು. ಹೀಗೆ ವಿವಿಧ ಭಾಷೆಗಳಲ್ಲಿ ಕರವೀರ ಹೂವು ಪ್ರಸಿದ್ಧ.
ಗಂಟೆಯಂತಹ ರಚನೆಯುಳ್ಳ, ಸೌಮ್ಯ ಸುಗಂಧದ ಕರವೀರದ ಹೂವು ಐದು ಎಸಳನ್ನು ಹೊಂದಿದ್ದು, ಇದರ ಮೊಗ್ಗು ಭರ್ಚಿಯಾಕಾರದಲ್ಲಿರುತ್ತದೆ. ತಿಳಿ ಹಸಿರು ಬಣ್ಣದ ಇದರ ಮೊಗ್ಗು ಅರಳಲು ನಾಲ್ಕೈದು ದಿನಗಳು ಬೇಕು.ಆದರೆ, ಎರಡು ದಿನಗಳವರೆಗೆ ಹೂವು ಗಿಡದ ಮೇಲೆ ಕೆಡದೇ ಉಳಿಯುತ್ತದೆ.ವರ್ಷಪೂರ್ತಿಯೂ ಹೂಬಿಡುವ ಈ ಸಸ್ಯ ಪ್ರಬೇಧಗಳಲ್ಲಿ ಹಳದಿ, ಬಿಳಿ, ಕಾವಿ ಬಣ್ಣಗಳ ಹೂವುಗಳನ್ನು ನೋಡಲು ಸಾಧ್ಯ. ವಿಶೇಷವೆಂದರೆ, ಕೇಸರದಳಗಳು ಹೂವಿನ ಹೊರಗೆ ಕಾಣುವುದೇ ಇಲ್ಲ. ಬದಲಾಗಿ,ಹೂವಿನ ಬುಡದ ಕೊಳವೆಯಾಕಾರದೊಳಗೆ ನತ್ತಿನಾಕಾರದಲ್ಲಿ ಇರುತ್ತದೆ!
ಗಿಡಕ್ಕೆ ಹೊಸದಾಗಿ ಚಿಗುರಿದ ಟೊಂಗೆಗಳು ಹಸಿರು ಬಣ್ಣದಲ್ಲಿರುತ್ತದೆ.ಬೆಳವಣಿಗೆ ಹೊಂದಿದಂತೆ ಇದು ಬೂದು ಬಣ್ಣವಾಗಿ ಮಾರ್ಪಡುತ್ತದೆ.ಇದಕ್ಕೆ ಟೊಂಗೆಯ ಚಿಗುರಿನ ತುದಿಯಲ್ಲಿಯೇ ಹೂವು ಬಿಡುತ್ತದೆ. ಮತ್ತು ಎಲೆಗಳಿರುವುದು ಕೂಡಾ ಟೊಂಗೆಯ ತುದಿಯಲ್ಲಿಯೇ.ಎಲೆಗಳು ಹತ್ತು ಇಂಚಿನಷ್ಷು ಉದ್ದವಾಗಿದ್ದು ಚೂಪಾಗಿರುತ್ತದೆ. ಇದರ ಕಾಯಿಗಳು ಹಸಿರು ಬಣ್ಣದಲ್ಲಿರುತ್ತವೆ.ಹಾಗೂ ಹಣ್ಣಾದಾಗ ಕಪ್ಪಾಗುತ್ತವೆ.ಇದರೊಳಗಿನ ಬೀಜವು ದೋಣಿಯಾಕಾರದ ಬಧ್ರವಾದ ಕವಚದಿಂದ ಆವೃತವಾಗಿದೆ. ಗಿಡದ ಪ್ರತಿಯೊಂದು ಭಾಗಗಳೂ ಕಹಿಯಾಗಿವೆ.ಆದರೂ, ದನಕರುಗಳು ಕರವೀರ ಹೂವನ್ನು ಆರಿಸಿ ತಿನ್ನುತ್ತವೆ! ಈ ಸಸ್ಯದ ಯಾವ ಭಾಗವನ್ನು ಕತ್ತರಿಸಿದರೂ ವಿಶಿಷ್ಟ ಘಮಲಿನ ಸೊನೆಯಂತಹ ಬಿಳಿ ದ್ರವ ಒಸರುವುದು ವಿಶೇಷ. ಕರವೀರದ ಪ್ರತಿಯೊಂದು ಭಾಗಗಳೂ ಔಷಧೀಯ ಗುಣಗಳನ್ನೊಳಗೊಂಡಿದ್ದು ಬಹು ಅಪರೂಪದ ಸಸ್ಯ ಪ್ರಬೇಧವಾಗಿದೆ.
.............................................................
ಬರಹ-- ಭವ್ಯಾ ನೇರಲಜಡ್ಡಿ.
ಚಿತ್ರಗಳು-- ಲೀಲಾವತಿ ಹೆಗಡೆ.
ಮಾರ್ಚ್ 16, 2016
" ಕಣ್ಮನ ಸೆಳೆವ- ಕಾಳ್ನೂವು "
ಯಾವುದೇ ಆರೈಕೆಯಿಲ್ಲದೆಯೇ ಸೊಂಪಾಗಿ ಬೆಳೆವ "ಕಳ್ಳನ ಗಿಡ" ಪಶ್ಚಿಮ ಘಟ್ಟ ಪ್ರದೇಶದ ಮಲೆನಾಡಿನ ಅಡವಿಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಈ ಭಾಗದಲ್ಲಿ ಇದರ ಹೂವಿಗೆ "ಕಾಳ್ನೂವು" ಎಂದು ಕರೆಯುತ್ತಾರೆ.ಇಲ್ಲಿ, ಚೌತಿ ಹಬ್ಬದ ಗಣಪತಿಯ ಪೂಜೆಗೆ ವಿಶೇಷ ಪುಷ್ಪವಾಗಿ ಕಾಳ್ನೂವನ್ನು ಮಾಲೆ ಮಾಡಿ ಬಳಸಲಾಗುತ್ತದೆ. ಸಾಮಾನ್ಯವಾಗಿ ಅಗಸ್ಟ್ - ಸಪ್ಟೆಂಬರ್ ತಿಂಗಳಿನಲ್ಲಿ ಗಿಡದ ತುಂಬಾ ಹೂವು ಅರಳಿ ಕಂಗೊಳಿಸುತ್ತದೆ.ಹಾಗೆಯೇ, ಸಮಶೀತೋಷ್ಣ ಪ್ರದೇಶಗಳಲ್ಲಿ ಕಾಣಸಿಗುವ ಅಪರೂಪದ ಸಸ್ಯ ಪ್ರಬೇಧವಿದು.
ಎರಡು ಮೀಟರ್ ಎತ್ತರದವರೆಗೂ ಬೆಳೆಯುವ ಈ ದೀರ್ಘಕಾಲಿಕ ಪೊದೆ ಸಸ್ಯದ ಸಸ್ಯಶಾಸ್ತ್ರೀಯ ಹೆಸರು ಆರ್ಗೇರಿಯಾ ಕ್ಯುನೇಟಾ(Argyreia Cuneata). ಇದನ್ನು ಕನ್ನಡದಲ್ಲಿ - ಕಳ್ಳನ ಗಿಡ, ಕಳ್ಳನ ಹಂಬು, ನೆಟ್ಟರುಳು ಎಂದರೆ, ಇಂಗ್ಲೀಷ್ ಭಾಷೆಯಲ್ಲಿ- ಪರ್ಪಲ್ ಮಾರ್ನಿಂಗ್ ಗ್ಲೋರಿ (Purple Morning Glory), ಮೈಸೂರು ಆರ್ಗೇರಿಯಾ(Mysore Argyreia). ಮರಾಠಿಯಲ್ಲಿ- ಮ್ಹಾಳುಂಗಿ, ತಮಿಳು ಭಾಷೆಯಲ್ಲಿ- ಕನ್ವಾಲಿ ಪೂ. ಎಂದು ಗುರುತಿಸಲಾಗುತ್ತದೆ.
ಗಿಡವು ನಯವಾದ ಬಹು ಕಾಂಡಗಳನ್ನೊಳಗೊಂಡಿದೆ. ಚಿಗುರಿದ ಪ್ರತಿ ಟಿಸಿಲುಗಳ ತುಂಬಾ ಗಾಢ ಗುಲಾಬಿ ಬಣ್ಣದ ಕಾಳ್ನೂವುಗಳು ಅರಳುತ್ತವೆ. ತಿಳಿ ಹಸಿರಿನ ಗುಂಡಗಿನ ಮೊಗ್ಗು ಅರಳಲು ಆರರಿಂದ ಎಂಟು ದಿನಗಳು ಬೇಕು.ಆದರೆ ಪೂರ್ತಿಯಾಗಿ ಅರಳಿದ ಮಂದ ಸುವಾಸಿತ ಹೂಗಳು ಒಂದೇ ದಿನದಲ್ಲಿ ತನ್ನ ಸೊಬಗನ್ನು ಬೀರಿ ಹಳಸಿ ಹೋಗುತ್ತವೆ. ಹೂವು ಕೊಳವೆಯಾಕಾರದಲ್ಲಿದ್ದು ಐದು ಸೆಂ.ಮೀ ಉದ್ದವಿರುತ್ತದೆ.ಇದು ಬಿಡಿಯಾದ ಹೂವಲ್ಲ. ಆದರೆ, ಗರಿಷ್ಟ ಮೂರು ಹೂವಿನ ಗೊಂಚಲಿನಲ್ಲಿ ಹೂಗಳು ಅರಳುತ್ತವೆ. ಹೂವಿನ ಕೊಳವೆಯಿಂದ ಪೂರ್ತಿಯಾಗಿ ಹೊರಚಾಚಿಕೊಂಡಿರದ ಬಿಳಿಯ ಕೇಸರದಳ ಹೂವಿನ ಪ್ರಮುಖ ಆಕರ್ಷಣೆ.
ಈ ಸಸ್ಯದ ಎಲೆಯು ಮೂರರಿಂದ ಹತ್ತು ಸೆಂ.ಮೀ ಉದ್ದವಾಗಿದ್ದು, ಎರಡೂವರೆ ಸೆಂ.ಮೀ ಯಷ್ಟು ಅಗಲವಾಗಿರುತ್ತದೆ. ಮತ್ತು ಎಲೆಯು ತುದಿಯಲ್ಲಿ ಮೊಂಡಾಗಿರುತ್ತದೆ.ಎಲೆಯ ಇಡೀ ಅಂಚು ಗುಲಾಬಿ ಬಣ್ಣ ಹೊಂದಿರುವುದು ವಿಶೇಷ. ಕಳ್ಳನ ಗಿಡದ ಎಲೆಗಳು ಸಾಂಪ್ರದಾಯಿಕ ನಾಟಿ ಔಷಧಿಗಳಲ್ಲಿ ಬಳಕೆಯಾಗುತ್ತವೆ.
..............................................................
ಬರಹ-- ಭವ್ಯಾ ನೇರಲಜಡ್ಡಿ.
ಚಿತ್ರಗಳು-- ಪ್ರದೀಪ ಹೆಗಡೆ.